ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವಪೂಜಾ ವಿಧಾನ

ಭಾಗ 100

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 20 ಏಪ್ರಿಲ್ 2022, 18:48 IST
Last Updated 20 ಏಪ್ರಿಲ್ 2022, 18:48 IST
   

ಸೃಷಿಖಂಡದ ಶಿವಪೂಜಾವರ್ಣನ ಎಂಬ ಹದಿಮೂರನೆ ಅಧ್ಯಾಯದಲ್ಲಿ ಬ್ರಹ್ಮ ತನಗೆ ವಿಷ್ಣು ಹೇಳಿದ ಶಿವಪೂಜಾ ವಿಧಾನವನ್ನು ದೇವತೆಗಳಿಗೆ ತಿಳಿಸಿದ್ದನ್ನು ನಾರದನಿಗೆ ಹೇಳುತ್ತಾನೆ.

ಎಲೈ ಋಷಿಗಳಿರಾ, ದೇವತೆಗಳಿರಾ, ಎಲ್ಲ ಅಭೀಷ್ಟಗಳನ್ನೂ ಸುಖಗಳನ್ನೂ ಕೊಡುವಂಥ ಶ್ರೇಷ್ಠವಾದ ಶಿವಪೂಜಾ ವಿಧಾನವನ್ನು ಹೇಳುತ್ತೇನೆ, ಕೇಳಿರಿ; ಬ್ರಾಹ್ಮಿಮುಹೂರ್ತದಲ್ಲಿ ಎದ್ದು ಪಾರ್ವತಿಯಿಂದೊಡಗೂಡಿದ ಶಿವನನ್ನು ಸ್ಮರಣೆಮಾಡಬೇಕು. ‘ಓ ದೇವಶ್ರೇಷ್ಠ, ಏಳು, ಎದ್ದೇಳು. ಓ ಪಾರ್ವತೀಕಾಂತ, ಬ್ರಹ್ಮಾಂಡದಲ್ಲಿ ಎಲ್ಲರಿಗೂ ಮಂಗಳವನ್ನು ಕರುಣಿಸು. ಧರ್ಮವು ಇಂಥಾದ್ದೆಂದು ತಿಳಿದಿದ್ದರೂ ನನಗೆ ಅದರಲ್ಲಿ ಪ್ರವೃತ್ತಿಯಿಲ್ಲ. ಅಧರ್ಮವು ಇಂಥದೆಂದು ಗೊತ್ತು. ಆದರೆ ನಾನದನ್ನು ಬಿಟ್ಟಿಲ್ಲ. ನಮ್ಮ ಹೃದಯದಲ್ಲಿ ನೆಲಸಿರುವ ನೀನು ನಮ್ಮನ್ನು ಹೇಗೆ ಪ್ರೇರೇಪಿಸುವಿಯೋ ಆ ರೀತಿ ಮಾಡುತ್ತೇನೆ’ – ಈ ರೀತಿ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿ, ಗುರುಪಾದುಕೆಗಳನ್ನು ನೆನೆದು, ನಂತರ ಮಲಮೂತ್ರಾದಿ ಶೌಚಕರ್ಮಗಳಿಗೋಸ್ಕರ ಹೊರಗೆ ದಕ್ಷಿಣಾಭಿಮುಖವಾಗಿ ಹೋಗಬೇಕು. ಬಳಿಕ ಮಣ್ಣು, ನೀರುಗಳಿಂದ ದೇಹಶುದ್ಧಿಯನ್ನು ಮಾಡಿಕೊಂಡು, ಕೈಕಾಲುಗಳನ್ನು ಚೆನ್ನಾಗಿ ತೊಳೆದು, ಹಲ್ಲುಗಳನ್ನು ಉಜ್ಜಿಕೊಳ್ಳಬೇಕು.

ಭಕ್ತನಾದವನು ಷಷ್ಠೀ, ಅಮಾವಾಸ್ಯೆ, ನವಮೀ ಮುಂತಾದ ತಿಥಿಗಳೂ, ಭಾನುವಾರದಂದು ಕಡ್ಡಾಯವಾಗಿ ಹಲ್ಲುಗಳನ್ನುಜ್ಜಬಾರದು. ತನಗೆ ಅವಕಾಶ ದೊರೆತಂತೆ ನದೀ ಮೊದಲಾದ ಜಲಾಶಯಗಳಲ್ಲೋ, ಮನೆಯಲ್ಲಿಯೋ, ದೇಹಕ್ಕೂ ಕಾಲಕ್ಕೂ ವಿರೋಧವಿಲ್ಲದಂತೆ ಚೆನ್ನಾಗಿ ಸ್ನಾನವನ್ನು ಮಾಡಬೇಕು. ಭಾನುವಾರ, ಶ್ರಾದ್ಧದಿವಸ, ಸಂಕ್ರಮಣ, ಗ್ರಹಣದಿನ, ಮಹಾದಾನಗಳನ್ನು ಮಾಡುವ ಸಮಯ. ತೀರ್ಥಕ್ಷೇತ್ರಗಳಲ್ಲಿ, ಏಕಾದಶಿ ಮುಂತಾದ ಉಪವಾಸದಿವಸಗಳಲ್ಲಿ, ಅಶೌಚಾದಿಗಳಲ್ಲಿ ಬಿಸಿನೀರಿನಲ್ಲಿ ಸ್ನಾನಮಾಡಬಾರದು. ಪುಣ್ಯತೀರ್ಥ ನದಿಗಳಲ್ಲಿ ಭಕ್ತಿಯುಕ್ತನಾಗಿ ನಿಂತು, ನೀರು ತನಗೆ ಅಭಿಮುಖವಾಗಿ ಹರಿದುಬರುವ ಕಡೆ ಸ್ನಾನಮಾಡಬೇಕು.

ADVERTISEMENT

ವಾರಗಳನ್ನು ಪರಿಶೀಲಿಸಿ ಕ್ರಮವಾಗಿ ಎಣ್ಣೆಯನ್ನೊತ್ತಿ ನೀರೆರೆದುಕೊಳ್ಳಬೇಕು. ನಿತ್ಯವೂ ಹಾಗೆ ತೈಲಾಭ್ಯಂಗನವನ್ನು ಮಾಡಿಕೊಳ್ಳುವ ಅಭ್ಯಾಸವಿದ್ದಲ್ಲಿ ಸುವಾಸನೆಯ ಎಣ್ಣೆ ದೂಷಿತವಲ್ಲ. ಶ್ರಾದ್ಧ, ಗ್ರಹಣ, ಉಪವಾಸ, ಪಾಡ್ಯಮಿ ಮತ್ತು ಗ್ರಹಣದಿನವೊಂದನ್ನು ಬಿಟ್ಟು, ಉಳಿದ ದಿನಗಳಲ್ಲಿ ಸಾಸಿವೆಯ ಎಣ್ಣೆಗೆ ದೋಷವಿಲ್ಲ. ಈ ರೀತಿ ವಿಧಿಗನುಸಾರವಾಗಿ, ಉತ್ತರಾಭಿಮುಖವಾಗಿಯೇ ಪೂರ್ವಾಭಿಮುಖವಾಗಿಯೋ ಸ್ನಾನವನ್ನಾಚರಿಸಬೇಕು.

ಸಾಧಕನು ಎಂದಿಗೂ ಉಟ್ಟ ಬಟ್ಟೆಯನ್ನು ಒಗೆಯದೆ ಹಾಗೆಯೇ ಸ್ನಾನಮಾಡಬಾರದು. ಶುದ್ಧವಾದ ವಸ್ತ್ರವನ್ನುಟ್ಟು ಆಯಾ ದೇವರನ್ನು ಸ್ಮರಿಸುತ್ತಾ ಸ್ನಾನಮಾಡಬೇಕು. ಇನ್ನೊಬ್ಬರ ಬಟ್ಟೆ, ರಾತ್ರಿ ಹೊದ್ದಿದ್ದ ಬಟ್ಟೆ, ಇವು ಉಚ್ಛಿಷ್ಟವೆನಿಸುವುವು. ಅವುಗಳನ್ನುಟ್ಟು ಸ್ನಾನ ಮಾಡಬಾರದು. ಸ್ನಾನವಾದ ಮೇಲೆ ಒದ್ದೆಬಟ್ಟೆಗಳನ್ನು ಬಿಚ್ಚಿಬಿಡಬೇಕು. ದೇವತೆಗಳು, ಋಷಿಗಳು, ಪಿತೃಗಳುಗಳಿಗೆ ತೃಪ್ತಿಯನ್ನುಂಟುಮಾಡುವುದಕ್ಕಾಗಿ ತರ್ಪಣವನ್ನು ಮಾಡಿ, ಮಡಿಬಟ್ಟೆಯನ್ನುಟ್ಟ ಬಳಿಕ ಆಚಮನವನ್ನು ಮಾಡಬೇಕು.

ನಂತರ ಗೋಮಯವನ್ನು ತಂದು ಸಾರಿಸಿ ಶುದ್ಧಮಾಡಿ, ಶುಭಕರವಾದ ಆಸನವನ್ನು ಏರ್ಪಡಿಸಬೇಕು. ಶುದ್ಧವಾದ ಮರದಿಂದ ಮಾಡಲ್ಪಟ್ಟ ಮಣೆಯನ್ನಾಗಲೀ, ಅಗಲವಾದ ಪೀಠವನ್ನಾಗಲೀ, ಕೋರಿದುದೆಲ್ಲವನ್ನೂ ಕೊಡುವ ಚಿತ್ರಾಸನವನ್ನಾಗಲೀ, ಉಪಯೋಗಿಸಬೇಕು. ಅಥವಾ ತನ್ನ ಆಶ್ರಮಕ್ಕೆ ಉಚಿತವಾದ ಕೃಷ್ಣಾಜಿನ ಮುಂತಾದುವನ್ನು ಉಪಯೋಗಿಸಬಹುದು. ಭಸ್ಮದಿಂದ ತ್ರಿಪುಂಡ್ರ ಧಾರಣವನ್ನು ಮಾಡಬೇಕು. ಭಸ್ಮದ ಮೂರು ಎಳೆಗಳಿಂದ ತಾನು ಮಾಡಿದ ಜಪವೂ ತಪಸ್ಸೂ ದಾನವೂ ಸಫಲವಾಗುವುದು. ಭಸ್ಮವು ದೊರೆಯದೆ ಹೋದರೆ ನೀರು ಮುಂತಾದುವುಗಳಿಂದ ತ್ರಿಪುಂಡ್ರವನ್ನು ಧರಿಸಬಹುದು.

ತ್ರಿಪುಂಡ್ರವನ್ನು ಧರಿಸಿದಮೇಲೆ ರುದ್ರಾಕ್ಷಿಗಳನ್ನು ಧರಿಸಬೇಕು. ಬಳಿಕ ತನ್ನ ನಿತ್ಯಕರ್ಮಗಳನ್ನು ಪೂರೈಸಿಕೊಂಡು ಶಿವನನ್ನು ಪೂಜಿಸಬೇಕು. ಮಂತ್ರಪೂರ್ವಕವಾಗಿ ಮೂರು ಸಲ ಆಚಮನವನ್ನು ಮಾಡಬೇಕು. ಅಥವಾ ಇದೇ ಗಂಗಾಜಲವೆಂದು ಉಚ್ಚರಿಸುತ್ತಾ ಒಂದು ಸಲವಾದರೂ ಆಚಮನವನ್ನು ಮಾಡಬೇಕು. ಹಾಗೆಯೇ, ಶಿವನ ಪೂಜೆಗೆಂದು ಅನ್ನೋದಕಗಳನ್ನೂ, ತನ್ನ ಶಕ್ತಿಯಿದ್ದಷ್ಟು ಇತರ ವಸ್ತುಗಳನ್ನೂ ಬಳಿಯಲ್ಲಿ ಇಟ್ಟುಕೊಳ್ಳಬೇಕು. ಗಂಧ, ಮಂತ್ರಾಕ್ಷತೆ, ನೀರು ತುಂಬಿದ ಅರ್ಘ್ಯಪಾತ್ರವೊಂದನ್ನು, ಉಪಚಾರಗಳನ್ನು ನೆರವೇರಿಸಲು ತನ್ನ ಬಲತೋಳಿನ ಕಡೆ ಇಟ್ಟುಕೊಳ್ಳಬೇಕು. ಗುರುವಿನ ಅಪ್ಪಣೆ ಪಡೆಯಬೇಕು. ತಾನು ಇಂತಹ ಇಷ್ಟಪ್ರಾಪ್ತಿಗಾಗಿ ಈ ಪೂಜೆಯನ್ನು ಮಾಡುವೆನು ಎಂಬುದಾಗಿ ಸಂಕಲ್ಪವನ್ನು ವಿಧಿವತ್ತಾಗಿ ಮಾಡಿ, ಶಿವನನ್ನು ಅತಿಶಯವಾದ ಭಕ್ತಿಯಿಂದ ಪೂಜಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.