ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಹೆಣ್ಣು ಜಗದ ಕಣ್ಣು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 16 ಅಕ್ಟೋಬರ್ 2020, 19:31 IST
Last Updated 16 ಅಕ್ಟೋಬರ್ 2020, 19:31 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   
""

ಹೆಣ್ಣನ್ನು ನಮ್ಮ ಧರ್ಮ-ಸಂಸ್ಕೃತಿಯಲ್ಲಿ ದೇವರೆಂದು ಪೂಜಿಸುತ್ತೇವೆ. ಪುರುಷದೇವರಿಗಿಂತ ಸ್ತ್ರೀದೇವತೆ ಶಕ್ತಿವಂತಳೆಂದೂ ಗುರುತಿಸಿದ್ದೇವೆ. ತಾಯಿಯಾಗಿ, ಸೋದರಿಯಾಗಿ, ಮಡದಿಯಾಗಿ ಮನುಕುಲವನ್ನು ಪೊರೆವ ಆಕೆಯ ಧೀಶಕ್ತಿ ಸದಾ ಕಾಲ ಈ ಜಗತ್ತನ್ನು ಕಾಪಾಡುತ್ತಿದೆ. ಪುರುಷನ ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆಂಬುದು ಎಷ್ಟು ಸತ್ಯವೋ, ಪುರುಷನ ಸರ್ವನಾಶದ ಹಿಂದೆಯೂ ಹೆಣ್ಣು ಇರುತ್ತಾಳೆಂಬುದು ಅಷ್ಟೇ ಸತ್ಯ.ಪುರಾಣ-ಇತಿಹಾಸಗಳಲ್ಲಿ ನಡೆದ ವಿಪ್ಲವಗಳಿಗೆಲ್ಲಾ ಹೆಣ್ಣೇ ಕಾರಣ ಅನ್ನೋದು ಸುಳ್ಳಲ್ಲ. ಹೀಗಾಗಿ ‘ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ’ ಎಂಬ ಮಾತು ಚಾಲ್ತಿಗೆ ಬಂತು.

ಪುರುಷ ಜಗತ್ತಿನಲ್ಲಿ ಹೆಣ್ಣು ದುರ್ಬಲೆ. ಆಕೆ ದೈಹಿಕವಾಗಿ ದುರ್ಬಲಳಾದರೂ, ಮಾನಸಿಕವಾಗಿ ಪ್ರಬಲೆ. ಒಂದು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುತ್ತಾಳೆ ಎಂಬುದಕ್ಕೆ ರಾವಣ-ಕೌರವರ ಅವನತಿಯೇ ಸಾಕ್ಷಿ. ಅನಾದಿಕಾಲದಿಂದ ಪುರುಷನ ದೌರ್ಜನ್ಯವನ್ನು ಸಹಿಸುತ್ತಾ ಬಂದಿದ್ದಾಳೆ. ಆದರೆ ಅವಳ ಸಂಕಷ್ಟ ಮಾತ್ರ ಕೊನೆಗೊಂಡಿಲ್ಲ. ಹೆಣ್ಣಿನ ಸಹಿಷ್ಣುತೆ ಕಂಡೇ ಆಕೆಯನ್ನು ಭೂಮಿಗೆ ಹೋಲಿಸಲಾಗಿದೆ. ತ್ಯಾಗಕ್ಕೆ ಮತ್ತೊಂದು ಹೆಸರೇ ಸ್ತ್ರೀ. ತಾಯಿಯಾಗಿ ಸೋದರಿಯಾಗಿ ಪುತ್ರಿಯಾಗಿ ಪುರುಷನಿಗೆ ಆಸರೆಯಾಗುವ ಆಕೆ, ದುರುಳರಿಗೆ ಕಾಮದ ವಸ್ತುವಿನಂತೆ ಕಾಣುವುದು ದುರ್ದೈವದ ಸಂಗತಿ.

ಗಂಡನ ದುಡಿಮೆಗೆ ನೆರಳಾಗಿ, ಕುಟುಂಬಕ್ಕೆ ನೆರವಾಗಿ ಮಾನವಸಂಕುಲವನ್ನು ಸಲಹುತ್ತಾ ಬಂದಿರುವ ಆಕೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ–ದೌರ್ಜನ್ಯಗಳು ಮಾತ್ರ ಇಂದಿಗೂ ನಿಂತಿಲ್ಲ. ರಾವಣರಂಥವರ ಕಾಮದ ಕಣ್ಣುಗಳು ದೇವತೆಯಂಥ ಪಾರ್ವತಿಯನ್ನೇ ಬಿಟ್ಟಿಲ್ಲ. ಸೋದರರ ಪತ್ನಿಯ ಸೀರೆಯನ್ನೇ ಎಳೆವ ದುಶ್ಶಾಸನರು ನಾಶವಾಗಿಲ್ಲ. ಹೆಣ್ಣಿಗೊಂದು ಮನಸ್ಸಿದೆ, ಆ ಮನಸ್ಸಿನಲ್ಲಿ ಸ್ವಂತಿಕೆಯ ಕನಸಿದೆ ಎಂಬುದನ್ನು ಪುರುಷಸಮಾಜ ಈಗಲೂ ಅರಿತಿಲ್ಲ. ಸುಶಿಕ್ಷಿತ ಪುರುಷರಲ್ಲೇ ಹೆಣ್ಣನ್ನು ಸೀಮಿತ ಚೌಕಟ್ಟಿನಲ್ಲಿ ಕಟ್ಟಿ ಹಾಕುವ ಹುನ್ನಾರ ಸರಾಗವಾಗಿ ಸಾಗಿದೆ. ಹೆಣ್ಣಿನ ಬಗ್ಗೆ ಪುರುಷರಿಗಿರುವ ಅನಾದರತೆಯನ್ನು ಕಂಡೇ ನಮ್ಮ ಪ್ರಾಜ್ಞರು ಸ್ತ್ರೀಶಕ್ತಿಯನ್ನು ಅಗಣಿತವಾಗಿ ವರ್ಣಿಸಿ ಪುರುಷಸಮಾಜವನ್ನು ಎಚ್ಚರಿಸಿದ್ದಾರೆ.

ADVERTISEMENT

ಪುರುಷನ ಕಾಮದ ಕಣ್ಣು ಕೀಳಲೆಂದೇ ದುರ್ಗೆ ಅವತಾರ ಎತ್ತಿದ್ದಾಳೆ. ಮಹಿಷಾಸುರನನ್ನು ಮರ್ಧಿಸಿದ್ದಾಳೆ. ಮೂಕಾಸುರನನ್ನು ವಧಿಸಿದ್ದಾಳೆ. ಕೀಚಕರ ಕೈ ಕತ್ತರಿಸಿದ್ದಾಳೆ. ಕಾಮುಕ ರಕ್ತಬೀಜಾಸುರರ ಹುಟ್ಟಡಗಿಸಲು ಜ್ವಾಲಮಾಲಿನಿಯಾಗಿದ್ದಾಳೆ. ಕಾಮುಕರು ಹುಟ್ಟಿದಾಗೆಲ್ಲಾ ಆದಿಶಕ್ತಿ ಅವತಾರ ಎತ್ತಿ ಅಂಧಕಾಸುರರ ಸಂಹಾರ ಮಾಡಿದ್ದಾಳೆ. ಹೆಣ್ಣಿನ ಗೌರವಕ್ಕೆ ಕಳಂಕ ತರುವವರು ಹೇಗೆ ಸರ್ವನಾಶವಾಗುತ್ತಾರೆ ಎಂಬುದನ್ನು ಪುರಾಣಗಳು ಎಷ್ಟೇ ಹೇಳಿದರೂ, ದುರುಳರ ಅಟ್ಟಹಾಸ ನಿಂತಿಲ್ಲ.

ನವರಾತ್ರಿ ಉತ್ಸವ ಸ್ತ್ರೀಶಕ್ತಿಯ ವೈಭವ ಮಾತ್ರವಲ್ಲ; ಪುರುಷರ ಕಣ್ಣಿನಲ್ಲಿ ಹೆಣ್ಣಿನ ಬಗ್ಗೆ ಗೌರವ ಭಾವನೆ ಮೂಡಿಸುವ ಉಪದೇಶಿತ ಉತ್ಸವ. ಪರರ ತಾಯಿಯನ್ನು ನಮ್ಮ ತಾಯಿಯಂತೆ ಗೌರವಿಸುವ, ಪರಸ್ತ್ರೀಯರಲ್ಲಿ ನಮ್ಮ ಅಕ್ಕ-ತಂಗಿ-ಮಗಳನ್ನು ಕಾಣುವ ಅರ್ಥಪೂರ್ಣ ಉತ್ಸವ. ನಮ್ಮ ಹಿರಿಯರು ಯಾವುದನ್ನೂ ಅರ್ಥವಿಲ್ಲದೆ ಮಾಡಿಲ್ಲ; ಅರ್ಥ ಮಾಡಿಕೊಳ್ಳುವುದರಲ್ಲಿ ಸಮಾಜ ಸೋತಿದೆ ಅಷ್ಟೇ. ಇದರಿಂದಾಗಿಯೇ, ಸ್ತ್ರೀಯರಿಗೆ ಮಹತ್ವದ ಸ್ಥಾನ ನೀಡಿದ್ದರೂ, ಆಕೆಗೆ ಸಲ್ಲಬೇಕಾದ ಗೌರವ, ಸಿಗಬೇಕಾದ ನೆಮ್ಮದಿ, ಜೀವನ ಭದ್ರತೆ ಸಿಗುತ್ತಿಲ್ಲ. ನವರಾತ್ರಿ ಉತ್ಸವ ಪ್ರದರ್ಶನಕ್ಕಷ್ಟೆ ಸೀಮಿತವಾಗದೆ, ನಿಜವಾದ ಸ್ತ್ರೀಶಕ್ತಿಯ ಅನಾವರಣವಾಗಬೇಕು. ನವದುರ್ಗೆಯರ ಪೂಜಿಸಿದರಷ್ಟೇ ಸಾಲದು, ಸ್ತ್ರೀರಕ್ಷಣೆಗೆ ಸಂಕಲ್ಪ ತೊಡಬೇಕು. ಜಗದೋದ್ಧಾರಳಾದ ಆ ಮಾತೆ ಸದಾ ಆನಂದವಾಗಿರುವುದೇ ‘ಸಚ್ಚಿದಾನಂದ’ ಜಗತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.