ಯಳಂದೂರು: ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣದ ಸದ್ವಿನಿಯೋಗವಾಗಲಿ ಎಂದು ಬುಧವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ 2012-13 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ನೆರದಿದ್ದ ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಸ್ವ, ಬಂಡವಾಳ ಹಾಗೂ ಅಸಾಧಾರಣ ಸ್ವೀಕೃತಿಗಳಿಂದ 8.40 ಕೋಟಿ ರೂಪಾಯಿ ಹಾಗೂ ರಾಜಸ್ವ, ಬಂಡವಾಳ ಹಾಗೂ ಅಸಾಧಾರಣ ಪಾವತಿಗಳಿಂದ 13.39 ಕೋಟಿ ರೂ. ಗಳ ಮತ್ತು 38.06 ಲಕ್ಷ ರೂ.ಗಳ ಉಳಿತಾಯ ಬಜೆಟ್‌ನ ಗುರಿ ಹೊಂದಿರುವುದಾಗಿ ಈ ಸಭೆಯಲ್ಲಿ ಆಯವ್ಯಯದ ಪಕ್ಷಿ ನೋಟವನ್ನು ಸಭೆಗೆ ಓದಿ ಹೇಳಲಾಯಿತು.
ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ನೀರಿನ ಕೇಂದ್ರಗಳನ್ನು ಸ್ಥಾಪಿಸಬೇಕು, ಬಳೇಪೇಟೆಯಲ್ಲಿ ಪೊಲೀಸ್ ಚೌಕಿ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಇಲ್ಲಿ ಬಸ್ ನಿಲ್ದಾಣವನ್ನೂ ಮಾಡಬೇಕು ಎಂಬುದಾಗಿ ಪಟ್ಟಣದ ನಾಗರೀಕರು ಸೂಚಿಸಿದರು. ಚರಂಡಿ ನಿರ್ವಹಣೆ ಕಡೆ ಹೆಚ್ಚಿನ ಗಮನ ಹರಿಸಬೇಕು, ಒಳಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಹಣವನ್ನು ಮೀಸಲಿರಿಸಿ ಕಾಮಗಾರಿ ಆದಷ್ಟು ಬೇಗ ಆರಂಭಿಸುವಂತೆ ಸೂಚನೆ ನೀಡಲಾಯಿತು. ಪಟ್ಟಣದ ಗಾಂಧಿ ಸರ್ಕಲ್‌ಗೆ ನಾಮಫಲಕ ಅಳವಡಿಸಲು ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ ಉಪಾಧ್ಯಕ್ಷೆ ಚಿನ್ನಮ್ಮಮರಯ್ಯ, ಸದಸ್ಯರಾದ ಮೀನಾಕ್ಷಿ ಮಹದೇವಸ್ವಾಮಿ, ನಾಗರತ್ನ ಮಹೇಶ್, ಉಷಾರಾಣಿ, ಶ್ರೀನಿವಾಸನಾಯಕ, ಜಯರಾಂ, ಸೋಮನಾಯಕ, ವೈ.ಎನ್. ಮನೋಹರ್ ಮುಖ್ಯಾಧಿಕಾರಿ ವಿಜಯ, ಆರೋಗ್ಯಾಧಿಕಾರಿ ಉಮಾಶಂಕರ್, ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಿದ್ಧೇಶ್, ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಕರವೇ ಅಧ್ಯಕ್ಷ ಚೇತನ್, ಎ. ಉಮೇಶ್, ಅನಿಲ್‌ಕುಮಾರ್, ಕಲೀಂಉಲ್ಲಾ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.