ADVERTISEMENT

ಅರಬ್ಬಿತಿಟ್ಟು ಅರಣ್ಯದಲ್ಲಿ ಮತ್ತೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ಹುಣಸೂರು: ತಾಲ್ಲೂಕಿನ ಅರಬ್ಬಿತಿಟ್ಟು ಅರಣ್ಯದಲ್ಲಿ ಶುಕ್ರವಾರ ಮಧ್ಯಾಹ್ನ ಮತ್ತೆ ಬೆಂಕಿ ಕಾಣಿಸಿಕೊಂಡು ಅಂದಾಜು ನೂರಾರು ಎಕರೆ ಅರಣ್ಯ ಭಸ್ಮವಾಗಿದೆ.

ಮೈಸೂರು ವನ್ಯಜೀವಿ ವಿಭಾಗಕ್ಕೆ ಸೇರಿದ ಅರಬ್ಬಿತಿಟ್ಟು ಅರಣ್ಯ ಪ್ರದೇಶಕ್ಕೆ ಒಂದು ವಾರದಲ್ಲಿ ಎರಡನೇ ಬಾರಿ ಬೆಂಕಿ ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ಜೀವಿಗಳಿಗೆ ಹಾನಿಯಾಗಿದೆ. ಮಧ್ಯಾಹ್ನ ಅರಣ್ಯದ ಮಧ್ಯಭಾಗದಿಂದ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಸಮಯದಲ್ಲೇ ಕಾಡಿನ ಎಲ್ಲ ದಿಕ್ಕುಗಳಿಗೂ ಹರಡಿದೆ.

ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಚಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿದು ಸ್ಥಳಕ್ಕೆ ತೆರಳಿದರೂ ಅರಣ್ಯ ಇಲಾಖೆ ಸಿಬ್ಬಂದಿ ಇನ್ನೂ ಬಂದಿರಲಿಲ್ಲ. ಹುಣಸೂರು ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ದೂರವಾಣಿ ಮೂಲಕ ತಿಳಿಸಿದರೂ ಸಂಬಂಧಿಸಿದ ಅಧಿಕಾರಿಗಳು ಸಕಾಲಕ್ಕೆ ಬರಲಿಲ್ಲ. ಇದರಿಂದಾಗಿ ಸ್ಥಳದಲ್ಲಿದ್ದ ಒಬ್ಬನೇ ಸಿಬ್ಬಂದಿ ಬೆಂಕಿ ನಂದಿಸಲು ಪರದಾಡುತ್ತಿದ್ದರು.

ಮೈಸೂರು ವನ್ಯಜೀವಿ ವಿಭಾಗಕ್ಕೆ ಸೇರಿದ ಈ ಅರಣ್ಯ ಅಂದಾಜು 3 ಸಾವಿರ ಎಕರೆ ವಿಸ್ತಾರವಿದೆ. ಆದರೆ, ಅರಣ್ಯ ಸಂಕರಕ್ಷಣೆಗೆ ಕೇವಲ 6 ಸಿಬ್ಬಂದಿ ಮತ್ತು ಒಬ್ಬ ಫಾರೆಸ್ಟರ್ ಇದ್ದಾರೆ. ಬೇಸಿಗೆಯಲ್ಲಿ ಬೆಂಕಿ ನಂದಿಸಲು 6 ಹೆಚ್ಚುವರಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದಾಗಿ 3 ಸಾವಿರ ಎಕರೆ ಪ್ರದೇಶವನ್ನು 12 ಜನ ಕಾವಲು ಮಾಡಬೇಕು. ಈ ಸಿಬ್ಬಂದಿಗೂ ವಾಹನ ಸೌಲಭ್ಯ ಇಲ್ಲ.

ಎಚ್.ಡಿ.ಕೋಟೆ ವರದಿ: ಮೇಟಿಕುಪ್ಪೆ ಅರಣ್ಯ ವಲಯದ ಬಹುತೇಕ ಭಾಗಗಳಲ್ಲಿ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಿರಿಜನರ ಸಹಕಾರದಿಂದ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.