ADVERTISEMENT

ಕಾಮಗಾರಿ ಪೂರ್ಣಗೊಳಿಸದೆ ರಸ್ತೆ ಶುಲ್ಕ ವಸೂಲಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST
ಕಾಮಗಾರಿ ಪೂರ್ಣಗೊಳಿಸದೆ ರಸ್ತೆ ಶುಲ್ಕ ವಸೂಲಿ
ಕಾಮಗಾರಿ ಪೂರ್ಣಗೊಳಿಸದೆ ರಸ್ತೆ ಶುಲ್ಕ ವಸೂಲಿ   

ದಾವಣಗೆರೆ: ಚಿತ್ರದುರ್ಗದಿಂದ ಹಾವೇರಿವರೆಗಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ 129 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಪೂರ್ಣಗೊಂಡು ಅಗತ್ಯ ಸೌಲಭ್ಯ ಕಲ್ಪಿಸುವ ಮೊದಲೇ ಬಳಕೆದಾರರಿಂದ ಶುಲ್ಕ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ನಿಯಮದಂತೆ ರಸ್ತೆ ಶುಲ್ಕ ಸಂಗ್ರಹಿಸುವ ಮುನ್ನ ಚತುಷ್ಪಥ ರಸ್ತೆಯನ್ನು ವಾಹನಗಳ ಸುಗಮ ಸಂಚಾರಕ್ಕೆ ಮುಕ್ತಗೊಳಿಸುವುದು. ಅದಕ್ಕೆ ಪೂರಕವಾಗಿ ನಗರ, ಹಳ್ಳಿ, ಜಮೀನುಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಅಂಡರ್‌ಪಾಸ್, ಬೈಪಾಸ್, ಸರ್ವಿಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಅಲ್ಲದೆ, ನಿಗದಿತ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಿಸಬೇಕು. ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಅಗತ್ಯವಾದ ಕ್ರೇನ್ ಸಿದ್ಧವಿರಬೇಕು ಎಂಬ ನಿಯಮವಿದೆ. ಆದರೆ, ಚತುಷ್ಪಥ ರಸ್ತೆ ಪೂರ್ಣಗೊಳಿಸಲು ಒತ್ತು ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸರ್ವಿಸ್ ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿಲ್ಲ.

ಚಿತ್ರದುರ್ಗದಿಂದ ಹರಿಹರದವರೆಗಿನ ಪ್ಯಾಕೇಜ್-4ರ ಅಡಿ 71 ಕಿ.ಮೀ. ರಸ್ತೆಯಲ್ಲಿ ಬರುವ ಆನಗೋಡು, ಹೆಬ್ಬಾಳು, ಬಿ. ಕಲ್ಪನಹಳ್ಳಿ, ದೊಡ್ಡಬಾತಿ ಸೇರಿದಂತೆ ಹಲವು ಭಾಗಗಳಲ್ಲಿ ಅಂಡರ್‌ಪಾಸ್, ಸರ್ವಿಸ್ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ. ಶೌಚಾಲಯ, ಕುಡಿಯುವ ನೀರು ಇತರೆ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ.

ದುಬಾರಿ ಶುಲ್ಕ: ಇತರ ಶುಲ್ಕ ಸಂಗ್ರಹ ಕೇಂದ್ರಗಳಲ್ಲಿ ನಿಗದಿಪಡಿಸಿರುವ ಶುಲ್ಕಕ್ಕಿಂತ ಚಿತ್ರದುರ್ಗ-ಹಾವೇರಿ ನಡುವೆ ಇರುವ ಹೆಬ್ಬಾಳು ಹಾಗೂ ಕರೂರು ಕೇಂದ್ರಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಾರೆ ಎನ್ನುವುದು ವಾಹನ ಮಾಲೀಕರ ದೂರು.

`ಸೇವಾ ರಸ್ತೆಗಳು, ಅಂಡರ್‌ಪಾಸ್ ಹಾಗೂ ಇತರ ಮೂಲಸೌಕರ್ಯ ಕಲಿಸದೇ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹೆಬ್ಬಾಳು ಕೇಂದ್ರದಲ್ಲಿ ಅದಕ್ಕಿಂತಲೂ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ ಒಮ್ಮುಖ ಸಂಚಾರಕ್ಕೆ ಲಘುವಾಹನಕ್ಕೆ ರೂ 65 ಹಾಗೂ ಬಸ್, ಲಾರಿಗೆ ರೂ 215-230 ವಸೂಲಿ ಮಾಡಲಾಗುತ್ತಿದೆ~ ಎಂದು ದೂರುತ್ತಾರೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಾಲಿಬಾಬು.

ರಾಷ್ಟ್ರೀಯ ಹೆದ್ದಾರಿ-4ನ್ನು ಚತುಷ್ಪದ ರಸ್ತೆಯಾಗಿ ಪರಿವರ್ತಿಸಲು 1999-2000ರಲ್ಲಿ ಚಾಲನೆ ನೀಡಲಾಗಿತ್ತು. ನಿಗದಿತ ಗುರಿಯಂತೆ ಅದನ್ನು 2003ರಲ್ಲಿ ಪೂರ್ಣಗೊಳಿಸಬೇಕಿತ್ತು. ತುಮಕೂರಿನಿಂದ ಹಾವೇರಿವರೆಗಿನ 129 ಕಿ.ಮೀ. ರಸ್ತೆ ಕಾಮಗಾರಿ ಯೋಜನೆ ಆರಂಭವಾಗಿ 11 ವರ್ಷವಾದರೂ ಪೂರ್ಣವಾಗಿರಲಿಲ್ಲ.

ಈ ಸಂಬಂಧ 2007ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2011ರಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ 6 ತಿಂಗಳ ಒಳಗೆ ಮುಖ್ಯರಸ್ತೆ, ಅಂಡರ್‌ಪಾಸ್, ಮೇಲುಸೇತುವೆ ಹಾಗೂ ಸೇವಾ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಿತ್ತು. ಆದರೆ, ಇದುವರೆಗೂ ಮುಖ್ಯರಸ್ತೆ ಹೊರತುಪಡಿಸಿ, ಉಳಿದ ಕಾಮಗಾರಿ ಪರಿಪೂರ್ಣವಾಗಿಲ್ಲ.

`ರೈತರ ಹಾಗೂ ಗ್ರಾಮಸ್ಥರ ಅಸಹಕಾರದಿಂದ ಆನಗೋಡು ಸೇರಿದಂತೆ ಕೆಲ ಭಾಗಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಅಗತ್ಯವಿರುವ ಸೇವಾರಸ್ತೆ, ಇತರೆ ಸೌಲಭ್ಯಕ್ಕೆ ಜಿಲ್ಲಾಡಳಿತ ಭೂಸ್ವಾಧೀನ ಮಾಡಿಕೊಟ್ಟರೆ, ಗ್ರಾಮಸ್ಥರು ಸಹಕರಿಸಿದರೆ ಎಲ್ಲ ಕಾಮಗಾರಿ ಶೀಘ್ರ ಪೂರ್ಣಗೊಳಿಸುತ್ತೇವೆ~ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ಹಾಗೂ ಯೋಜನಾಧಿಕಾರಿ ಸಿರಿವೆಲ್ಲಾ ವಿಜಯಕುಮಾರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.