ADVERTISEMENT

ಜಿಲ್ಲಾನೋಟ:ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್‌ನಗರ 1ನೇ ಹಂತದಲ್ಲಿ ಸೋಮವಾರ ಜರುಗಿದೆ. ಆತ್ಮಹತ್ಯೆಗೆ ಯತ್ನಿಸಿದವರು ಅಸ್ವಸ್ಥರಾಗಿದ್ದು, ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜೀವ್‌ನಗರ 1ನೇ ಹಂತದ ನಿವಾಸಿ ನೂರ್ ಅಹಮ್ಮದ್ ಅವರ ಪತ್ನಿ ಮುಬೀನ ತಾಜ್ (35), ಇವರ ಮಕ್ಕಳಾದ ನೂರ್ ತಾಂಜಿಯ (17), ನೂರ್ ಸಾದಿಯ (15), ನೂರ್ ಅಪ್ಸಾ ಬಾನು (14) ಮತ್ತು ನೂರ್ ಸಾಜಿಯ (12) ಆತ್ಮಹತ್ಯೆಗೆ ಯತ್ನಿಸಿದವರು.

ಬಾದಾಮಿ ಹಾಲಿನೊಂದಿಗೆ ಕೀಟನಾಶಕ ಬೆರೆಸಿ ಸಂಜೆ 5 ಗಂಟೆ ಸುಮಾರಿನಲ್ಲಿ ಐವರು ವಿಷ ಸೇವಿಸಿದ್ದಾರೆ. ಪತಿ ನೂರ್ ಅಹಮ್ಮದ್ ಮನೆಗೆ ಬಂದಾಗ ಪತ್ನಿ ಮಕ್ಕಳು ಒದ್ದಾಡುತ್ತಿದ್ದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂತು. ಕೂಡಲೇ ಐವರನ್ನು ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಯಿತು.

ವೃತ್ತಿಯಲ್ಲಿ ಕಾರು ಚಾಲಕನಾದ ನೂರ್ ಅಹಮ್ಮದ್‌ಗೆ ಇಬ್ಬರು ಪತ್ನಿಯರು. ಮೊದಲನೇ ಪತ್ನಿ ಮೈಮೂನ್ ತಾಜ್‌ಗೆ ವಿಚ್ಛೇದನ ನೀಡಿದ್ದು ಬೆಂಗಳೂರಿನಲ್ಲಿ ವಾಸವಿದ್ದಾರೆ. ಮೊದಲನೇ ಹೆಂಡತಿಗೆ ಇಬ್ಬರು ಪುತ್ರರು, ಪುತ್ರಿಯರಿದ್ದಾರೆ. ಮೊದಲನೇ ಪತ್ನಿಯ ಮಗಳು ತಸ್ಮಿಯ ಪತಿಯನ್ನು ಬಿಟ್ಟು ಅಲೀಂ ನಗರದಲ್ಲಿ ವಾಸವಿದ್ದ ತಂದೆ ನೂರ್ ಅಹಮ್ಮದ್ ಮನೆಗೆ ಬಂದರು. ಜೊತೆಯಲ್ಲಿ ಚಿನ್ನಾಭರಣಗಳನ್ನು ತಂದಿದ್ದರು. ಚಿನ್ನಾಭರಣ ವಿಚಾರವಾಗಿ ತಸ್ಮಿಯ ಮತ್ತು ಎರಡನೇ ಪತ್ನಿ ಮುಬೀನ ತಾಜ್‌ರೊಂದಿಗೆ ಜಗಳವಾಗಿತ್ತು.

15 ದಿನಗಳ ಹಿಂದೆಯಷ್ಟೇ ಅಲೀಂ ನಗರದ ಬಾಡಿಗೆ ಮನೆ ಖಾಲಿ ಮಾಡಿಕೊಂಡು ನೂರ್ ಅಹಮ್ಮದ್ ರಾಜೀವ್‌ನಗರ 1ನೇ ಹಂತದ ಬಾಡಿಗೆ ಮನೆಗೆ ಬಂದಿದ್ದರು. ಚಿನ್ನಾಭರಣ ವಿಚಾರವಾಗಿ ಜಗಳ ನಡೆದು ಬೇಸತ್ತಿದ್ದರಿಂದ ಮುಬೀನ್ ತಾಜ್ ತನ್ನ ನಾಲ್ವರು ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.