ADVERTISEMENT

ತೋಟದಲ್ಲಿದ್ದ ಚಿರತೆ ಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ತಿಪಟೂರು: ತಾಲ್ಲೂಕಿನ ಗುಂಗುರಮಳೆ ಗ್ರಾಮದ ತೋಟದಲ್ಲಿ ಭಾನುವಾರ ಮೂರು ತಿಂಗಳ ಹೆಣ್ಣು ಚಿರತೆ ಮರಿ ಯುವಕರ ಕೈಗೆ ಸಿಕ್ಕಿ, ನಂತರ ಅರಣ್ಯ ಇಲಾಖೆ ಅಧಿಕಾರಿಗಳ ಕೈ ಸೇರಿತು.

ಬೆಳಿಗ್ಗೆ ತೋಟಕ್ಕೆ ಹೋಗಿದ್ದ ಕುಮಾರ್ ಎಂಬುವವರಿಗೆ ತೋಟದ ಬೇಲಿ ಮರೆಯಲ್ಲಿದ್ದ ಚಿರತೆ ಮರಿ ಕಣ್ಣಿಗೆ ಬಿದ್ದಿದೆ. ವಿಷಯ ತಿಳಿದು ಅಲ್ಲಿಗೆ ಬಂದ ಪ್ರವೀಣ್, ರಾಮಣ್ಣ, ಶೇಖರ್ ಎಂಬುವವರು ನೋಡಲು ಪ್ರಯತ್ನಿಸಿದಾಗ ಚಿರತೆ ಮರಿಯು ತಪ್ಪಿಸಿಕೊಳ್ಳುವ ಭರದಲ್ಲಿ ಕತ್ತಾಳೆ ಸಂದಿಗೆ ಸಿಕ್ಕಿಬಿದ್ದಿತು.

ಯುವಕರು ಚಿರತೆ ಮರಿಯನ್ನು ನೋವಾಗದಂತೆ ಹಿಡಿದು ಗ್ರಾಮಕ್ಕೆ ತಂದಾಗ ನೋಡಲು ಜನರ ಗುಂಪು ಸೇರಿತ್ತು. ಗ್ರಾಮದಲ್ಲಿ ನಡೆಯುತ್ತಿದ್ದ ಶಾಲಾ ಸಮಾರಂಭಕ್ಕೆ ಬಂದಿದ್ದ ಮಕ್ಕಳು ಕುತೂಹಲದಿಂದ ಚಿರತೆ ಮರಿ ವೀಕ್ಷಿಸಿದರು. ಮೊಬೈಲ್‌ಗಳಲ್ಲಿ ಚಿತ್ರ ತೆಗೆದುಕೊಳ್ಳಲು ಯುವಕರು ಮುಗಿಬಿದ್ದರು. ಜನರ ಗುಂಪಿಗೆ ಬೆದರಿದ್ದ ಚಿರತೆ ಮರಿ ಹಲ್ಲು ಕಿರಿದು ರೋಷ ವ್ಯಕ್ತಪಡಿಸುತ್ತಿತ್ತು.

ಗ್ರಾಮದ ಪರಿಸರ ಪ್ರೇಮಿ ಮುರುಳೀಧರ್ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಎಸಿಎಫ್ ಮಾಗಡಯ್ಯ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಬಂದು ಚಿರತೆ ಮರಿಯನ್ನು ತಮ್ಮ ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.