ADVERTISEMENT

ನೀರು ಸದುಪಯೋಗ: ಸಚಿವ ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ಚನ್ನರಾಯಪಟ್ಟಣ: `ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು~ ಎಂದು ಶಾಸಕ ಸಿ.ಎಸ್. ಪುಟ್ಟೇಗೌಡ ಗುರುವಾರ ಸಲಹೆ ನೀಡಿದರು.

ನವಿಲೆ ನಾಗೇಶ್ವರ ಏತ ನೀರಾವತಿ ಸಂಘದ ವತಿಯಿಂದ ತಾಲ್ಲೂಕಿನ ನವಿಲೆ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಏತ ನೀರಾವರಿ ಯೋಜನೆಯನ್ನು ನೀರೆತ್ತುವ ಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಸಮರ್ಪಿಸಿ ಮಾತನಾಡಿದರು.

`ನೀರಿಗೆ ಮಹತ್ವವಿದೆ. ನೀರನ್ನು ಬಳಸಿಕೊಳ್ಳುವಾಗ ಬೇಜವಾಬ್ದಾರಿ ಸಲ್ಲದು. ಏತ ನೀರಾವರಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ ಸಿಬ್ಬಂದಿ ಹೆಚ್ಚಳ ಸೇರಿ ಇದರ ನಿರ್ವಹಣೆಗೆ ಅನುಕೂಲವಾಗಲಿದೆ. ಇದಕ್ಕೆ ಅಗತ್ಯ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು~ ಎಂದರು.

`ನುಗ್ಗೇಹಳ್ಳಿ ಕೆರೆಗೆ ನೀರು ಹರಿಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮನಾಯಕನಹಳ್ಳಿ ಬಳಿ ಹಾದು ಹೋಗಿರುವ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಸಮರ್ಪಕ ನೀರು ಹರಿಯುತ್ತಿಲ್ಲ. ಕಾಲುವೆಯ ನೀರನ್ನು ಗ್ರಾಮದ ಕೆರೆಗೆ ಸರಾಗವಾಗಿ ತುಂಬಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಬೇಕು~ ಎಂದು ಹೇಳಿದರು.

ನವಿಲೆ ನಾಗೇಶ್ವರ ನೀರಾವರಿ ಸಂಘದ ಅಧ್ಯಕ್ಷ ಎ.ಈ. ಚಂದ್ರಶೇಖರ್ ಮಾತನಾಡಿ, `ಕಾಲುವೆಯಲ್ಲಿ ತುಂಬಿರುವ ಹೂಳು ತೆಗೆಸಬೇಕು. ಕೆರೆಗೆ ನೀರು ತುಂಬಿಸಲು ಸಂಪರ್ಕ ಕಲ್ಪಿಸಿರುವ ಕಾಲುವೆಗಳ ತೂಬನ್ನು ರೈತರು ಕೀಳಬಾರದು~ ಎಂದು ಮನವಿ ಮಾಡಿದರು.

 ಎಚ್‌ಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಎಚ್.ಎಸ್. ಶ್ರೀಕಂಠಯ್ಯ, ಸಂತೇಶಿವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಳ್ಳೇಗೌಡ, ನೀರಾವರಿ ಸಂಘದ ಕಾರ್ಯದರ್ಶಿ ವೀರೇಶ್, ತುರುವೇಕೆರೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಅಶ್ವತ್ಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಕೆ.ಜವರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.