ADVERTISEMENT

ಬತ್ತಕ್ಕೆ ಬೆಂಕಿ ರೋಗ: ತಡೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2011, 19:30 IST
Last Updated 11 ನವೆಂಬರ್ 2011, 19:30 IST
ಬತ್ತಕ್ಕೆ ಬೆಂಕಿ ರೋಗ: ತಡೆಗೆ ಸಲಹೆ
ಬತ್ತಕ್ಕೆ ಬೆಂಕಿ ರೋಗ: ತಡೆಗೆ ಸಲಹೆ   

ಚನ್ನಪಟ್ಟಣ: ತಾಲ್ಲೂಕಿನ ವಿವಿಧೆಡೆ ಬತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳುವಂತೆ, ತಾಲ್ಲೂಕು ಕೃಷಿ ಇಲಾಖೆ ರೈತರಲ್ಲಿ ಮನವಿ ಮಾಡಿದೆ.

ತಾಲ್ಲೂಕಿನ ಬಿ.ವಿ. ಹಳ್ಳಿ ಬತ್ತದ ಜಮೀನುಗಳಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದ್ದು, ಇದು ಮತ್ತಷ್ಟು ಹರಡುವ ಸಾಧ್ಯತೆ ಇದೆ. ಆದ್ದರಿಂದ  ರೈತರು ರೋಗ ಸೋಂಕಿತ ಬೆಳೆಗಳಿಗೆ ಅಗತ್ಯ ರೋಗ ನಿರೋಧಕ, ಔಷಧವನ್ನು ಸಿಂಪಡಿಸುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ. ಕಲಾವತಿ ಸಲಹೆ ನೀಡಿದ್ದಾರೆ.

ಬತ್ತಕ್ಕೆ ಬಾಧಿಸುವ ಎಲ್ಲಾ ರೋಗಗಳಿಗಿಂತಲೂ ಬೆಂಕಿ ರೋಗವು ತುಸು ಅಪಾಯಕಾರಿ ರೋಗ. ಹೆಚ್ಚು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಇದರ ತೀವ್ರತೆ ಹೆಚ್ಚು. ಹವಾಗುಣ, ತಳಿ, ಬೇಸಾಯ ಪದ್ದತಿ, ಬೆಳೆಗೆ ಒದಗಿಸುವ ರಸಗೊಬ್ಬರದ ಆಧಾರದ ಮೇಲೆ ಈ ರೋಗ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಬೆಂಕಿ ರೋಗದ ಲಕ್ಷಣ: ಬೆಂಕಿ ರೋಗವು ಬತ್ತದ ಬೇರನ್ನು ಬಿಟ್ಟು ಗಿಡದ ಉಳಿದೆಲ್ಲಾ ಭಾಗಗಳನ್ನು ಬಾಧಿಸುತ್ತದೆ. ಮೊದಲು ಎಲೆಗಳ ಮೇಲೆ 1ರಿಂದ3 ಮಿ.ಮೀ. ಉದ್ದದ ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇಂಥ ಚುಕ್ಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೂದು ಬಣ್ಣದ ಒಳಪದರ ಮತ್ತು ಕಂದು ಬಣ್ಣದ ಹೊರ ಪದರದ ವಜ್ರಾಕಾರದ ಚುಕ್ಕೆಗಳು ಗೋಚರಿಸುತ್ತವೆ. ರೋಗದ ತೀವ್ರತೆ ಹೆಚ್ಚಾದಂತೆ ಇಂಥ ವಜ್ರಾಕಾರದ ಚುಕ್ಕೆ ದೊಡ್ಡದಾಗುತ್ತವೆ. ಇವು ಒಂದಕ್ಕೊಂದು ಸೇರಿ ಎಲೆಯು ಎಲ್ಲಾ ಭಾಗಕ್ಕೆ ಹರಡುತ್ತವೆ. ಇದರಿಂದ ಗರಿಗಳು ಒಣಗುತ್ತವೆ. ರೋಗದ ಚಿಹ್ನೆಗಳು ಕಾಂಡ, ತೆನೆ, ಕಾಳಿನ ಕವಚ, ಗೆಣ್ಣಿನ ಭಾಗಗಳ ಮೇಲೆ ಈ ರೋಗ ಲಕ್ಷಣಗಳನ್ನು ಕಾಣಬಹುದು.

ಕಾಂಡದ ಗೆಣ್ಣಿನ ಭಾಗಕ್ಕೆ ರೋಗ ತಗುಲಿದಾಗದು ಮುರಿದು ಬೀಳುತ್ತದೆ. ತೆನೆಗೆ ರೋಗ ತಗುಲಿದರೆ ಕಾಳುಗಳು ಜೊಳ್ಳಾಗುತ್ತವೆ. ಈ ಲಕ್ಷಣಗಳನ್ನು ಬೆಳೆಯಲ್ಲಿ ಗಮನಿಸಿದರೆ ಬತ್ತದ ಬೆಳೆಗೆ ಬೆಂಕಿ ಇಟ್ಟಂತೆ ಗೋಚರಿಸುತ್ತದೆ. ಆದ್ದರಿಂದಲೇ ಈ ರೋಗಕ್ಕೆ ಬೆಂಕಿ ರೋಗ ಎಂದು ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಯಂತ್ರಣಕ್ಕೆ ಸಲಹೆ: ರೋಗ ನಿಯಂತ್ರಿಸಲು ಬತ್ತದ ಗದ್ದೆಯ ಸುತ್ತ ಹುಲ್ಲಿನ ಜಾತಿಗೆ ಸೇರಿದ ಕಳೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು.

ಕೆಸರು ಗದ್ದೆ ಮಾಡುವ ಸಂದರ್ಭದಲ್ಲಿ ಪ್ರತಿ ಎಕರೆಗೆ 800ಕೆ.ಜಿ. ಭತ್ತದ ಹೊಟ್ಟಿನ ಬೂದಿಯನ್ನು ಗದ್ದೆಯಲ್ಲಿ ಸೇರಿಸುವುದರಿಂದ ಸಿಲಿಕಾನ್ ಅಂಶವು ಸೇರಿ ಬೆಳೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ರೋಗ ರಹಿತ ಬೀಜಗಳನ್ನು ಬಿತ್ತನೆಗೆ ಬೆಳಸಬೇಕು. ಪ್ರತಿ ಕೆ.ಜಿ. ಬೀಜಕ್ಕೆ 2 ಗ್ರಾಂ ನಂತೆ ಕಾರ್ಬೆನ್‌ಡೈಜಿಮ್ ಶಿಲೀಂದ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಬೇಕು.

ಬೆಳೆಗೆ ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಒದಗಿಸಬೇಕು. ಮೇಲ್ಗೊಬ್ಬರ ಶೇ.25ರಷ್ಟು ಭಾಗವನ್ನು ನಾಟಿ ಮಾಡಿದ ನಾಲ್ಕು ವಾರದಲ್ಲಿ 22ಕೆ.ಜಿ. ಯೂರಿಯವನ್ನು ಮಾತ್ರ ಪ್ರತಿ ಎಕರೆಗೆ ನೀಡಬೇಕು. ತೆನೆ ಬರುವ 25 ದಿವಸಗಳ ಮುಂಚೆ ಉಳಿದ ಶೇ.25ಭಾಗ ಅಂದರೆ 22 ಕೆ.ಜಿ. ಯೂರಿಯವನ್ನು ಮೇಲೂ ಗೊಬ್ಬರವಾಗಿ ನೀಡಬೇಕು ಸಾರಜನಕ ಗೊಬ್ಬರ (ಯೂರಿಯ)ಗಳನ್ನು ಹೆಚ್ಚಿಗೆ ಬಳಸಬಾರದು.

ರೋಗ ನಿರೋಧಕ ತಳಿಗಳಾದ ಬಿ.ಆರ್.2655, ಅಭಿಲಾಷ್, ಐಇ ಟಿ-7564, ತಳಿಗಳನ್ನು ಉಪಯೋಗಿಸುವುದು ಸೂಕ್ತ. ಮುಂಗಾರು ಬೆಳೆ ಮತ್ತು ಹಿಂಗಾರು ಬೆಳೆ ಹಂಗಾಮಿನಲ್ಲಿ ಈ ರೋಗ ತೀವ್ರವಾಗಿ ಬರುವುದರಿಂದ ಯಾವುದೇ ಒಂದು ನಿರ್ದಿಷ್ಟ ಪದ್ಧತಿಯಿಂದ ಇದನ್ನು  ಹತೋಟಿ ಮಾಡುವುದು ಕಷ್ಟ. ಹೆಚ್ಚಿ ನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಲಹೆ ಪಡೆಯುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.

ಬೆಂಕಿ ರೋಗ ಹರಡಲು ಕಾರಣಗಳು

ಒಂದೇ ಪ್ರದೇಶದಲ್ಲಿ ನಿರಂತರವಾಗಿ ಬತ್ತ ಬೆಳೆಯುವುದರಿಂದ

ವರ್ಷದ ಎಲ್ಲಾ ಕಾಲದಲ್ಲಿ ಬೆಳೆಯುವುದರಿಂದ 

ಬೀಜೋಪಚಾರ ಮಾಡದೇ ಬಳಸುವ ಬಿತ್ತನೆ ಬೀಜಗಳಿಂದ ರೋಗ ಹರಡುತ್ತದೆ.

ಸಸಿ ಮಡಿ ಹಂತದಲ್ಲಿ ರೋಗ ಲಕ್ಷಣವನ್ನು ಗುರುತಿಸಿ, ಔಷಧ ಸಿಂಪಡಿಸುವುದಿರುವುದರಿಂದ

ಗದ್ದೆಯ ಸುತ್ತ ರೋಗದ ಮೂಲ ಸೋಂಕಿಗೆ ಆಸರೆ ನೀಡುವ ಹುಲ್ಲಿನ ಜಾತಿಯ ಕಳೆಗಳು ಬೆಳೆದಾಗ,

ರೋಗಾಣುವಿನ ಬೆಳವಣಿಗೆಗೆ ಪೂರಕವಾದ ಉಷ್ಣಾಂಶ 25-27 ಡಿಗ್ರಿ ಸೆಂ. ಮತ್ತು  ಆರ್ದ್ರತೆ ಶೇ.86 ರಿಂದ 98ಇದ್ದಾಗ

ನಿರಂತರವಾಗಿ ಜಿಟಿ ಜಿಟ್ಟಿ ಮಳೆ ಬರುವಾಗ, ಸಾರಜನಕ ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಗೆ ಹಾಕಿದಾಗ ಬೆಂಕಿ ರೋಗದ ಬಾಧೆ ಹೆಚ್ಚಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.