ಚಿಕ್ಕಬಳ್ಳಾಪುರ: ನೀರಿನಿಂದ ಸದಾ ತುಂಬಿ ತುಳುಕುತ್ತಿದ್ದ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದ ಬ್ಯಾಟರಾಯನಸ್ವಾಮಿ ದೇವಾಲಯದ ಪುಷ್ಕರಣಿಯು ಈಗ ನೀರಿಲ್ಲದೆ ಸೊರಗುತ್ತಿದೆ.ಜನರಷ್ಟೇ ಅಲ್ಲದೆ ಜಾನುವಾರುಗಳನ್ನೂ ಆಕರ್ಷಿಸುತ್ತಿದ್ದ ಪುಷ್ಕರಣಿಯು ಈ ಬಾರಿಯ ಬಿರು ಬಿಸಿಲಿಗೆ ನೀರಿಲ್ಲದೆ ಒಣಗಿ ನಿಂತಿದೆ.
ನೀರಿನಿಂದ ತುಂಬಿರುತ್ತಿದ್ದ ಪುಷ್ಕರಣಿ ಎದುರು ಕೂತು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದ ಗ್ರಾಮಸ್ಥರು ಗತ ಕಾಲದ ನೆನಪುಗಳನ್ನು ಮೆಲುಕು ಹಾಕುವಂತಾಗಿದೆ. ಪುಷ್ಕರಣಿಯು ಈ ಹಂತ ತಲುಪಿರುವುದು ಕಂಡು ಅವರು ವಿಷಾದಿಸುತ್ತಾರೆ.
`ಪುಷ್ಕರಣಿಯಲ್ಲಿ ಮೈದುಂಬಿ ಅಂಗಳಕ್ಕೆ ಹರಿದುಬರುತ್ತಿದ್ದ ನೀರನ್ನು ನೋಡುವುದೇ ಸೊಗಸಾಗಿತ್ತು. ನಾವೆಲ್ಲ ಅಲ್ಲಿಯೇ ಕೈಕಾಲು ತೊಳೆದುಕೊಂಡು ದೇವಾಲಯದ ಮೆಟ್ಟಿಲು ಏರುತ್ತಿದ್ದೆವು. ಆದರೆ ಪುಷ್ಕರಣಿಯಲ್ಲಿ ಈಗ ನೀರೂ ಇಲ್ಲ~ ಎಂದು ಗ್ರಾಮಸ್ಥ ಬ್ಯಾಟರಾಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
`ಪುಷ್ಕರಣಿಯಲ್ಲಿ ನೀರು ತುಂಬಿದಾಗಲೆಲ್ಲ ಪುಟ್ಟ ಮಂಪಟದಲ್ಲಿ ದೇವರ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತಿತ್ತು. ಪುಟ್ಟ ಮಂಟಪದತ್ತ ಹೋಗಲು ನಿರ್ಮಿಸಲಾಗಿರುವ ಪುಟ್ಟ ಸೇತುವೆಯ ಮೇಲೆ ನಡೆದುಕೊಂಡೇ ಹೋಗಿ ದೇವರನ್ನು ಪೂಜಿಸುತ್ತಿದ್ದೆವು. ಆದರೆ ಈಗ ನೀರೂ ಇಲ್ಲ. ಪುಟ್ಟ ಮಂಟಪದಲ್ಲಿ ದೇವರನ್ನು ಪೂಜಿಸಲಾಗುತ್ತಿಲ್ಲ. ಮಳೆ ಬಾರದಿದ್ದರೆ, ಪುಷ್ಕರಣಿಯು ಇನ್ನೂ ಎಂತಹ ದುಃಸ್ಥಿತಿಗೆ ತಲುಪುವುದೋ~ ಎಂದು ಅವರು ನೊಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.