ADVERTISEMENT

ಬೆಂಕಿ ಆಕಸ್ಮಿಕ: 13 ಎಕರೆ ತೆಂಗಿನ ತೋಟ ನಾಶ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:30 IST
Last Updated 8 ಮಾರ್ಚ್ 2011, 18:30 IST

ಶಿರಾ: ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ತೆಂಗಿನ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ  ಸುಮಾರು 13 ಎಕರೆ ತೋಟದ 600 ತೆಂಗಿನ ಮರಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.ಗ್ರಾಮದ ರಾಜಣ್ಣ ಅವರು ನೈಸರ್ಗಿಕ ಕೃಷಿಯಲ್ಲಿ ಬೆಳೆಸಲಾಗಿದ್ದ ತೆಂಗು ಮತ್ತು ಇತರೆ ಹಣ್ಣಿನ ಗಿಡಗಳು ಈ ಬೆಂಕಿ ಆಕಸ್ಮಿಕದಿಂದ ನಾಶವಾಗಿದ್ದು, ತೋಟದಲ್ಲಿದ್ದ 20 ಸಾವಿರ ಕೊಬ್ಬರಿ, ಗುಡಿಸಲು, ಹುಲ್ಲಿನ ಬಣವೆ, ವ್ಯವಸಾಯ ಸಾಮಾಗ್ರಿಗಳು, ಇತರೆ ಮರಗಳು ಸೇರಿದಂತೆ ಅಪಾರ ನಷ್ಟ ಸಂಭವಿಸಿದೆ.

ತೆಂಗಿನ ತೋಟವನ್ನು ನೈಸರ್ಗಿಕ ಕೃಷಿಯಲ್ಲಿ ಬೆಳೆಸಿದ್ದರಿಂದ ತೋಟದಲ್ಲಿ ರಾಶಿರಾಶಿ ತೆಂಗಿನಗರಿಗಳು, ಹುಲ್ಲು, ಇತರೆ ಗಿಡಗಂಟೆಗಳು ಬೆಳೆದು ನಿಂತಿದ್ದವು. ಅಲ್ಲದೆ ತೋಟದ ಮೇಲಿನ ಗುಡ್ಡದಲ್ಲಿ ಹುಲ್ಲು ಮತ್ತು ಗಿಡಗಂಟೆಗಳು ಒಣಗಿ ನಿಂತಿದ್ದವು. ದಾರಿ ಹೋಕರು ಬೀಡಿಸೇದಿ ಇಟ್ಟಿರುವ ಬೆಂಕಿ ಗುಡ್ಡದ ಮೂಲಕ ತೆಂಗಿನತೋಟ ತಲುಪಿದೆ ಎಂದು ಶಂಕಿಸಲಾಗಿದೆ.

ಸೋಮವಾರ ರಾತ್ರಿ ಬೆಂಕಿ ಬಿದ್ದಿದ್ದು, ಮಂಗಳವಾರ ಬೆಳಿಗ್ಗೆ ತೋಟಕ್ಕೆ ಬರುವವರೆಗೆ ಯಾರ ಗಮನಕ್ಕೂ ಇದು ಬಂದಿಲ್ಲ. ತೆಂಗಿನ ಮರಗಳನ್ನು 13 ವರ್ಷದ ಹಿಂದೆ ಬೆಳೆಸಲಾಗಿದ್ದು, ಉತ್ತಮ ಫಸಲು ಬರುತ್ತಿತ್ತು ಎಂದು ಮಾಲೀಕ ರಾಜಣ್ಣ ತಿಳಿಸಿದ್ದಾರೆ.ಸ್ಥಳಕ್ಕೆ ಮಂಗಳವಾರ ರೆವಿನ್ಯೂ ಇನ್ಸ್‌ಪೆಕ್ಟರ್ ರಾಜಣ್ಣ ಭೇಟಿ ನೀಡಿದ್ದರು. ದೊಡ್ಡಮಟ್ಟದ ಹಾನಿಯಾಗಿದ್ದರೂ ತಹಶೀಲ್ದಾರ್ ಸೇರಿದಂತೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಯ ಯಾವ ಅಧಿಕಾರಿಯೂ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.