ADVERTISEMENT

ರಸ್ತೆ ವಿಸ್ತರಣೆಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ದಾವಣಗೆರೆ:ನಗರದ ಪಿಬಿ ರಸ್ತೆಯನ್ನು ಕೂಡಲೇ ವಿಸ್ತರಣೆಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಸೋಮವಾರ ಧರಣಿ ನಡೆಯಿತು.

ಪಾಲಿಕೆ ಮುಂಭಾಗದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಸಂಚಾರ ದುಸ್ತರವಾಗುತ್ತಿದೆ. ಬೆಳೆಯುತ್ತಿರುವ ನಗರಕ್ಕೆ ಅಭಿವೃದ್ಧಿಯ ಹಿತದೃಷ್ಟಿಯಿಂದ ರಸ್ತೆ ವಿಸ್ತರಣೆ ಅಗತ್ಯ ಎಂದು ಪ್ರತಿಪಾದಿಸಿದರು.

ರಾಜ್ಯದ ವಿವಿಧ ಹೆದ್ದಾರಿಗಳ ಅಭಿವೃದ್ಧಿ ಆಗುತ್ತಿರುವ ಸಂದರ್ಭದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ ಕೂಡಲೇ ಆಗಬೇಕು. ಕೇವಲ ಮುಖ್ಯರಸ್ತೆಗಳು ಮಾತ್ರವಲ್ಲ. ನಗರದ ವಿವಿಧ ಬಡಾವಣೆಗಳ ಒಳರಸ್ತೆಗಳೂ ಅಭಿವೃದ್ಧಿ ಹೊಂದಬೇಕು. ಈಗಾಗಲೇ ಕೆಟ್ಟುಹೋಗಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಆದ್ಯತೆ ನೀಡಿ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ರಸ್ತೆ ವಿಸ್ತರಣೆ ವಿಚಾರದಲ್ಲಿ ತನ್ನ ಇಚ್ಛಾಶಕ್ತಿ ತೋರಿಸಬೇಕು. ಅಲ್ಲದೆ ರಸ್ತೆ ಒತ್ತುವರಿ ಮಾಡಿರುವವರನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಅಲ್ಲದೇ ಫುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಆವರಗೆರೆ ಚಂದ್ರು, ಉಮೇಶ್, ಎಚ್. ರಂಗಪ್ಪ, ಎಸ್. ನಾಗರಾಜ್, ಸೈಯದ್ ಖಾಜಾಪೀರ್, ಎಂ.ಜಿ. ಬಸವರಾಜ್, ತಿಪ್ಪೇಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.