ADVERTISEMENT

ಶಿಕ್ಷಣ ನೈತಿಕ ಕರ್ತೃತ್ವ ಶಕ್ತಿ ನೀಡಲಿ: ಸ್ವಾಮಿ ಸರಸ್ವತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಗುಲ್ಬರ್ಗ: ನೈತಿಕತೆ ಸಾಮರ್ಥ್ಯದೊಂದಿಗೆ ಮೇಳೈಸಿದ ಕರ್ತೃತ್ವ ಶಕ್ತಿ ಹಾಗೂ ಜವಾಬ್ದಾರಿ ಅರಿತ ಸ್ವಾತಂತ್ರ್ಯವನ್ನು ಶಿಕ್ಷಣ ನೀಡಲಿ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ಸ್ವಾಮಿ ವೀರೇಶಾನಂದ ಸರಸ್ವತಿ ಆಶಿಸಿದರು.

ಆಶ್ರಮ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ `ವಿವೇಕ ಚಿಂತನ~ ರಾಜ್ಯ ಮಟ್ಟದ ಸಮಾವೇಶದಲ್ಲಿ ಶನಿವಾರ ಅವರು ಮಾತನಾಡಿದರು.

ಚಾರಿತ್ರ್ಯವಂತ ಬದುಕು, ಬೌದ್ಧಿಕ ಸಾಮರ್ಥ್ಯದ ವಿಕಸನ, ಮಾನಸಿಕ ಶಕ್ತಿ ವೃದ್ಧಿ, ಸ್ವಾವಲಂಬನೆ, ನಿಸ್ವಾರ್ಥ ಬಯಕೆಗಳು ಶಿಕ್ಷಣದಿಂದ ದೊರೆಯಬೇಕು. ಬದುಕಿನಲ್ಲಿ ಸ್ವಾವಲಂಬನೆ, ಶ್ರಮ, ಸಾಮರ್ಥ್ಯ ಬರಬೇಕು ಎಂದ ಅವರು, ಶಿಕ್ಷಣವು ಯೋಗ್ಯತೆಯನ್ನು ನೀಡಬೇಕು. ಇಂದಿನ ಶಿಕ್ಷಣದಲ್ಲಿ  `ಪರ್ಸೆಂಟೇಜ್~ ಎಂಬುದು ಶಾಲೆ, ಕಚೇರಿ, ಗುತ್ತಿಗೆ ಮತ್ತಿತರ ವ್ಯವಹಾರದಲ್ಲಿ `ಮಾಮೂಲಿ~ಯಾಗಿದೆ ಎಂದು ಲಾಸ್ಯವಾಡಿದರು.

ಶಿಕ್ಷಣದಿಂದ ಸುಧಾರಣೆ ಸಾಧ್ಯ ಎಂಬ ವಿವೇಕಾನಂದರ ನಿಲುವು ಇಂದು ವಿಶ್ವವ್ಯಾಪಿಯಾಗಿದೆ. ಬದುಕು ಬಿದ್ದಾಗ ಎಚ್ಚರಿಸುವವನೇ ನಿಜವಾದ ಗುರು. ಅಂತಹ ಚಿಂತನೆ ವಿವೇಕಾನಂದರದ್ದು ಎಂದು ಗದಗ-ವಿಜಾಪುರ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿ ಹೇಳಿದರು.

ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ, ರಾಮಕೃಷ್ಣ ವಿವೇಕಾನಂದ ಆಶ್ರಮಗಳ ಸ್ವಾಮಿಗಳಾದ ಯೋಗೇಶ್ವರಾನಂದಜಿ ಮಹಾರಾಜ್, ಪ್ರಕಾಶಾನಂದಜಿ, ಜ್ಯೋತಿರ್ಮಯಾನಂದಜಿ, ಬ್ರಹ್ಮನಿಷ್ಠಾನಂದಜಿ, ಗದಾಧರಾನಂದಜಿ, ಶಾರದೇಶಾನಂದಜಿ ಸ್ವಾಮಿ ಮಹೇಶ್ವರಾನಂದ, ಸುವೇದಾನಂದ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.