ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 18:50 IST
Last Updated 20 ಜೂನ್ 2011, 18:50 IST

ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜು ಹಿಂಭಾಗ ನಿರ್ಮಿಸಿರುವ ನೂತನ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಮತ್ತು ತರಬೇತಿ ಕೇಂದ್ರವನ್ನು ಜ್ಲ್ಲಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಸೋಮವಾರ ಉದ್ಘಾಟಿಸಿದರು.

ರೂ 34.30 ಲಕ್ಷ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ನಿರ್ಮಿತಿ ಕೇಂದ್ರ ಈ ಕಟ್ಟಡವನ್ನು ನಿರ್ಮಿಸಿದೆ. ತರಬೇತಿ ಕೇಂದ್ರಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ರೂ 34.30 ಲಕ್ಷ ಮತ್ತು ಬಿಆರ್‌ಜಿಎಫ್‌ನಿಂದ ರೂ 10 ಲಕ್ಷ ಬಿಡುಗಡೆಯಾಗಿದೆ.

ತರಬೇತಿ ಕೇಂದ್ರದಲ್ಲಿ ಪೀಠೋಪಕರಣಕ್ಕೆ ರೂ 11 ಲಕ್ಷ, ಅಧ್ಯಯನ ಸಾಮಗ್ರಿಗಳು ರೂ 8 ಲಕ್ಷ, ಕಂಪ್ಯೂಟರ್ ಎಲ್‌ಸಿಡಿಗೆ ರೂ 10 ಲಕ್ಷ ಹಾಗೂ ಪುಸ್ತಕಗಳಿಗೆ ರೂ 10 ಲಕ್ಷ ಸೇರಿದಂತೆ ಒಟ್ಟು ರೂ 39 ಲಕ್ಷ ಮೀಸಲಿಡಲಾಗಿದೆ. ಕೇಂದ್ರದಲ್ಲಿ ಕೆಎಎಸ್, ಐಎಎಸ್, ಎಫ್‌ಡಿಎ, ಎಸ್‌ಡಿಎ, ಶಿಕ್ಷಕರ ನೇಮಕಾತಿ, ಏರ್‌ಮೆನ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಉದ್ಯೋಗ ವಿನಿಮಯ ಅಧಿಕಾರಿಗಳು ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಾರೆ ಎಂದು ಮುಖ್ಯ ಗ್ರಂಥಾಲಯ ಇಲಾಖೆ ಅಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಗ್ರಂಥಾಲಯ, ಇಂಟರ್‌ನೆಟ್, ನಿಯತಕಾಲಿಕೆಗಳು ಸೌಲಭ್ಯಗಳು ಈ ಕೇಂದ್ರದಲ್ಲಿವೆ. ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ರೂ 500 ಶುಲ್ಕ ಪಡೆಯಲಾಗುವುದು. ಚಿತ್ರದುರ್ಗ ಮತ್ತು ಇತರೆ ಜಿಲ್ಲೆಗಳಲ್ಲಿರುವ ನುರಿತ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ವಿಶ್ವವಿದ್ಯಾಲಯದ ತಜ್ಞರಿಂದ ತರಬೇತಿ ಕೊಡಿಸಲಾಗುವುದು ಎಂದರು.
ಸ್ಪರ್ಧಾತ್ಮಕ ಅಧ್ಯಯನ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪಾಧ್ಯಕ್ಷರಾಗಿದ್ದಾರೆ.
-----------

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.