ADVERTISEMENT

ಸ್ಮಶಾನ ಒತ್ತುವರಿ ತೆರವಿಗೆ ಸರ್ವೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಕೆಜಿಎಫ್:  ನಾಲ್ಕು ದಶಕಗಳಿಂದ ಗ್ರಾಮದ ಸ್ಮಶಾನ ಮತ್ತು ಗ್ರಾಮ ದೇವತೆ ದೇವಾಲಯವನ್ನು ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಲು ಕಂದಾಯ ಇಲಾಖೆ, ಸರ್ವೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಘಟನೆ ಶುಕ್ರವಾರ ಬೇತಮಂಗಲ ಸಮೀಪದ ಕೋಗಿಲಹಳ್ಳಿಯಲ್ಲಿ ನಡೆದಿದೆ.

ಒತ್ತುವರಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ನಲವತ್ತು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಈ ಸಂಬಂಧ ಬಂಗಾರಪೇಟೆ ತಹಶೀಲ್ದಾರ್ ಈಚೆಗೆ ಸರ್ವೆ ಇಲಾಖೆಗೆ ಪತ್ರ ಬರೆದು ಗ್ರಾಮಕ್ಕೆ ಭೇಟಿ ನೀಡಿ, ಸರ್ವೆ ನಡೆಸಿ ಒತ್ತುವರಿಯನ್ನು ಗುರುತಿಸಿಕೊಡುವಂತೆ ಸೂಚಿಸಿದ್ದರು. ಈ ಹಿಂದೆ ನಡೆಯಬೇಕಾಗಿದ್ದ ಸರ್ವೆ ಕಾರ್ಯಕ್ಕೆ ಒತ್ತುವರಿದಾರರು ತಡೆ ಒಡ್ಡಿದ್ದರಿಂದ ಪೊಲೀಸರ ಸುಪರ್ದಿಯಲ್ಲಿ ಸರ್ವೆ ನಡೆಯಬೇಕು. ಖುದ್ದಾಗಿ ಬೇತಮಂಗಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಜರಿರಬೇಕು ಎಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಇಡೀ ಗ್ರಾಮವೇ ಒತ್ತುವರಿಯನ್ನು ತೆರವು ಮಾಡುವ ಕಾರ್ಯಕ್ಕಾಗಿ ಕಾಯುತ್ತ ಕುಳಿತಿದ್ದರು. ಗ್ರಾಮದ ದೇವತೆಯಾದ ಕಾಟಪ್ಪರಾಜು ದೇವಾಲಯ ಪುನರುಜ್ಜೀವನ ಮಾಡಬಹುದು ಎಂದು ನಂಬಿಕೆಯಿಂದ ತೆರವು ಕಾರ್ಯವನ್ನು ವೀಕ್ಷಿಸುತ್ತಿದ್ದರು. ಆದರೆ ಒತ್ತುವರಿ ತೆರವು ಕಾರ್ಯದ ನೇತೃತ್ವದ ವಹಿಸಿದ್ದ ಬೇತಮಂಗಲ ಕಂದಾಯ ನಿರೀಕ್ಷಕ ರವೀಂದ್ರ ತೆರವುಗೊಳಿಸುವ ಮುನ್ನವೇ ಸ್ಥಳದಿಂದ ನಿರ್ಗಮಿಸಿದ್ದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಯಿತು.

ಗ್ರಾಮದಲ್ಲಿ ಒಟ್ಟು 125 ಎಕರೆ ಗೋಮಾಳವಿದೆ. ಕೃಷಿಗೆ ಜಮೀನು ಇಲ್ಲದವರು ತಲಾ 10 ಗುಂಟೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಇದೇ ಗೋಮಾಳದಲ್ಲಿ ಸ್ಮಶಾನವನ್ನು ಗುರುತಿಸಲಾಗಿತ್ತು. ಆದರೆ ಗ್ರಾಮದ ವ್ಯಕ್ತಿಯೊಬ್ಬರು ಎಲ್ಲ ಜಮೀನನ್ನು ಒತ್ತುವರಿ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದ ಹಿನ್ನಲೆಯಲ್ಲಿ ತಹಶೀಲ್ದಾರ್ ಒತ್ತುವರಿ ತೆರವುಗೊಳಿಸಲು ಸೂಚಿಸಿದ್ದರು. ಒತ್ತುವರಿಯಾಗಿರುವ ಜಮೀನು ಗುರುತಿಸಲಾಗಿದೆ. ಅದರ ಸರ್ವೆ ಸ್ಕೆಚ್‌ನ್ನು ತಹಶೀಲ್ದಾರ್‌ಗೆ ಸಲ್ಲಿಸದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಸರ್ವೇಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.