ADVERTISEMENT

ಹಳ್ಳಿಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST
ಹಳ್ಳಿಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕ
ಹಳ್ಳಿಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕ   

ಬೆಳಗಾವಿ: “ರೈತರಲ್ಲಿ ಜೈವಿಕ ಇಂಧನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಡಳಿ ವತಿಯಿಂದ ಪ್ರಸಕ್ತ ವರ್ಷ 100 ಹಳ್ಳಿಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಸಣ್ಣ ಘಟಕಗಳನ್ನು ನಿರ್ಮಿಸಲಾಗುವುದು” ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ತಿಳಿಸಿದರು.

ಅರಣ್ಯ ಇಲಾಖೆಯ ಸಭಾಂಗಣದಲ್ಲಿ ಬುಧವಾರ ನಡೆದ ಜೈವಿಕ ಇಂಧನ ಜಿಲ್ಲಾ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ರೈತರು ಬೆಳೆದ ಜೈವಿಕ ಇಂಧನಗಳ ಸಸಿಗಳಿಂದ ಬೀಜಗಳನ್ನು ಸಂಗ್ರಹಿಸಿ ಸ್ಥಳೀಯವಾಗಿ ಇಂಧನ ಉತ್ಪಾದಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಇಂಥ 100 ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ. ಪ್ರಸಕ್ತ ಬಜೆಟ್‌ನಲ್ಲಿ ಇದಕ್ಕೆ ಪ್ರತ್ಯೇಕ ಹಣ ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದು, ಅವರು ಸಮ್ಮತಿಸಿದ್ದಾರೆ” ಎಂದು ರಾಮಕೃಷ್ಣ ತಿಳಿಸಿದರು.

“ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡುವ ಈ ಘಟಕದಲ್ಲಿ ಪ್ರತಿ ದಿನವೂ 100 ಕೆ.ಜಿ. ಬೀಜದಿಂದ ಸುಮಾರು 15ರಿಂದ 20 ಲೀಟರ್ ಇಂಧನ ಉತ್ಪಾದಿಸಲಾಗುತ್ತದೆ. ಒಂದು ಘಟಕ ನಿರ್ಮಾಣಕ್ಕೆ ಸುಮಾರು 80,000 ದಿಂದ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರ ನಿರ್ವಹಣೆಯನ್ನು ಸ್ಥಳೀಯ ಸ್ವಸಹಾಯ ಸಂಘಗಳಿಗೆ ನೀಡಲಾಗುವುದು” ಎಂದು ಮಾಹಿತಿ ನೀಡಿದರು.

“ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಎಲ್ಲ ಸಾಗಾಣಿಕೆ ವಾಹನಗಳಿಗೆ ಹಾಗೂ ಏರ್ ಬಸ್‌ಗಳಿಗೆ ಜೈವಿಕ ಇಂಧನವನ್ನೇ ಬಳಸುವುದಾಗಿ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ 10 ವಾಹನಗಳಿಗೆ ಶೇ 20ರಷ್ಟು ಜೈವಿಕ ಇಂಧನವನ್ನೇ ಬಳಸುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲ ವಾಹನಗಳಿಗೂ ಜೈವಿಕ ಇಂಧನವನ್ನೇ ಬಳಸುವ ಗುರಿಯನ್ನು ಹೊಂದಿದ್ದೇವೆ” ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಅಜಯ್ ನಾಗಭೂಷಣ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜೆ.ಎನ್. ಪಾಟೀಲ, ಗಿರೀಶ ಹೊಸೂರ, ಪಿ. ಹೀರಾಲಾಲ್, ಡಾ. ಎಸ್.ಜೆ. ಪಾಟೀಲ, ಬರ್ಡ್ಸ್ ಸಂಸ್ಥೆಯ ಆರ್.ಎಂ. ಪಾಟೀಲ ಹಾಜರಿದ್ದರು. 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.