ADVERTISEMENT

ಅರೆ ಸೇನೆ ನಿಯೋಜನೆಗೆ ಕಾಂಗ್ರೆಸ್ ಮನವಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 7:54 IST
Last Updated 4 ಏಪ್ರಿಲ್ 2013, 7:54 IST

ಬಾಗಲಕೋಟೆ: `ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಚುನಾವಣೆ ಪ್ರಕ್ರಿಯೆಯಲ್ಲಿ ಬಿ.ವಿ.ವಿ. ಸಂಸ್ಥೆಯ ನೌಕರರನ್ನು ಸೇವೆಗೆ ಬಳಸಿಕೊಳ್ಳಬಾರದು ಮತ್ತು ಮುಕ್ತ ಮತದಾನ ನಡೆಸಲು ಅನುಕೂಲವಾಗುವಂತೆ ಅರೆ ಸೈನಿಕ ಪಡೆಯನ್ನು ಬಾಗಲಕೋಟೆ ನಗರಕ್ಕೆ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳಬೇಕು' ಎಂದು ಜಿಲ್ಲಾ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

`ಬಾಗಲಕೋಟೆ ಮತ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲಿರುವ ಹಾಲಿ ಶಾಸಕ ವೀರಣ್ಣ ಚರಂತಿಮಠ ಬಿ.ವಿ.ವಿ. ಸಂಸ್ಥೆಯ ಅಧ್ಯಕ್ಷರಾಗಿದ್ದು, ಈ ಸಂಸ್ಥೆಯ ನೌಕರರು ನಗರದಲ್ಲಿ ಮತದಾರರಾಗಿದ್ದಾರೆ.

ಹೀಗಾಗಿ ಚುನಾವಣಾ ಆಯೋಗದ ಕಾರ್ಯಕಲಾಪಗಳಿಗೆ ಬಾಗಲಕೋಟೆ ಮತಕ್ಷೇತ್ರದಲ್ಲಿ ಬಳಸಿಕೊಂಡಲ್ಲಿ ತಮ್ಮ ಸಂಸ್ಥೆಯ ಅಧ್ಯಕ್ಷರಾದ ಚರಂತಿಮಠರ ಪರ ಮತದಾರರ ಮೇಲೆ ಪ್ರಭಾವ ಬೀರಲಿದ್ದಾರೆ. ಕಾರಣ ಆಯೋಗದ ನಿಷ್ಪಕ್ಷಪಾತ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ.

ADVERTISEMENT

ಅದಕ್ಕಾಗಿ ನೌಕರರನ್ನು ಬೇರೆ ಮತಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಬೇಕು' ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಬಿ. ಸೌದಾಗರ  ಮನವಿ ಮಾಡಿದ್ದಾರೆ.

`ಮತದಾರರ ಪಟ್ಟಿ ಪ್ರಕಟಪಡಿಸಿದ ಸಂದರ್ಭದಲ್ಲಿ ಯಾವುದೇ ತೊಂದರೆಗಳು ಅಡೆತಡೆಗಳು ಕಂಡು ಬರುವುದಿಲ್ಲ. ಆದರೆ, ಚುನಾವಣೆಯ ದಿನ ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಅನೇಕರ ಹೆಸರುಗಳನ್ನು ತೆಗೆದುಹಾಕಿ ಮತದಾನಕ್ಕೆ ಅಡೆತಡೆ ಉಂಟು ಮಾಡುವ ಸಾಧ್ಯತೆ ಇದೆ' ಎಂದು ಪ್ರಕಟಣೆಯಲ್ಲಿ ಸಂಶಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.