ADVERTISEMENT

ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಮತದಾನ ಮಧ್ಯಾಹ್ನದ ನಂತರ ಚುರುಕು: ಯುವ ಮತದಾರರಿಂದ ಭರ್ಜರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:00 IST
Last Updated 13 ಮೇ 2018, 11:00 IST

ಬಾಗಲಕೋಟೆ: ಮತಗಟ್ಟೆ ಬಳಿ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಸಣ್ಣಪುಟ್ಟ ವಾಗ್ವಾದ, ತಳ್ಳಾಟ ಹೊರತಾಗಿ ಜಿಲ್ಲೆಯಲ್ಲಿ ಶನಿವಾರ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಸಂಜೆ 5 ಗಂಟೆಯ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ಬಿ.ಶ್ರೀರಾಮುಲು ಸ್ಪರ್ಧಿಸಿರುವ ಬಾದಾಮಿ ಕ್ಷೇತ್ರದಲ್ಲಿಯೇ ಅತಿ ಹೆಚ್ಚು (ಶೇ 69.88) ಮತದಾನವಾಗಿತ್ತು. ಮತದಾನಕ್ಕೆ ಮುಂಜಾನೆ ಜಿಲ್ಲೆಯ ಉಳಿದ ಕ್ಷೇತ್ರಗಳಿಗಿಂತ ಇಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಹೊತ್ತೇರುತ್ತಿದ್ದಂತೆಯೇ ಮತದಾನ ಪ್ರಮಾಣವೂ ಹೆಚ್ಚಳವಾಯಿತು.

ಮುಂಜಾನೆ ಏಳು ಗಂಟೆಗೆ ಆರಂಭವಾದ ಮತದಾನ ಬೆಳಗಿನ ಅವಧಿಯಲ್ಲಿ ಚುರುಕುಗೊಂಡಿತ್ತು. ಆದರೆ ಮಧ್ಯಾಹ್ನ ಬಿಸಿಲ ಬೇಗೆಗೆ ಜನ ಹೊರಗೆ ಬರಲಿಲ್ಲ. ಇದರಿಂದ ಮತದಾರರು ಇಲ್ಲದೇ ಮತಗಟ್ಟೆಗಳು ಬಿಕೊ ಎನ್ನುತ್ತಿದ್ದವು. ಮಧ್ಯಾಹ್ನ 3ರಿಂದ ಮತ್ತೆ ಮತದಾನ ಚುರುಕುಗೊಂಡು ಸಂಜೆ ಐದರ ವೇಳೆಗೆ ವೇಗ ಪಡೆಯಿತು. ಕ್ಷೇತ್ರಕ್ಕೆ ಎರಡರಂತೆ ಇದೇ ಮೊದಲ ಬಾರಿಗೆ ನಗೆ ಬೀರಿದ ‘ಸಖಿ‘ (ಪಿಂಕ್) ಮತಗಟ್ಟೆಗಳು ಮಹಿಳಾ ಮತದಾರರಿಗೆ ಆಪ್ತವೆನಿಸಿದವು.

ಮುಹೂರ್ತ ಮುಗಿಸಿಕೊಂಡು ಮದುವೆ ಮಂಟಪದಿಂದ ಪತಿ ಸಾಯಿರಾಮ್‌ ಜೊಗೆ ಎದ್ದು ಬಂದ ವಧು ಸೋನಲ್ ಸೋಮಾನಿ ಬಾಗಲಕೋಟೆಯ ಮತಗಟ್ಟೆ ಸಂಖ್ಯೆ 134ರಲ್ಲಿ ಮತಚಲಾಯಿಸಿ ಸಂಭ್ರಮಿಸಿದರು. ಬಾದಾಮಿ ತಾಲ್ಲೂಕು ಹಂಸನೂರು, ಬೂದಿನಗಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದೂರದ ಮಂಗಳೂರು, ಉಡುಪಿಗೆ ಗುಳೇ ಹೋದವರು ಬಸ್ ಮಾಡಿಕೊಂಡು ಬಂದು ಮತ ಚಲಾಯಿಸಿ ಗಮನ ಸೆಳೆದರು. ವಿಶೇಷವೆಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕುವ ಉತ್ಸಾಹ ತೋರಿದರು.

ADVERTISEMENT

ಬಾಗಲಕೋಟೆಯಲ್ಲಿ ಶಾಸಕ ಎಚ್.ವೈ.ಮೇಟಿ, ಪತ್ನಿ ಲಕ್ಷ್ಮೀ ಬಾಯಿ, ಪುತ್ರರಾದ ಮಲ್ಲಿಕಾರ್ಜುನ, ಉಮೇಶ ಅವರೊಂದಿಗೆ ಹುಟ್ಟೂರು ತಿಮ್ಮಾಪುರದಲ್ಲಿ ಮತ ಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪತ್ನಿ ರಾಜೇಶ್ವರಿ, ಪುತ್ರ ಡಾ.ನವೀನ್ ಅವರೊಂದಿಗೆ ಶಾಸಕರ ಮಾದರಿ ಶಾಲೆಯ ಮತಗಟ್ಟೆ ಸಂಖ್ಯೆ 130ರಲ್ಲಿ ಹಾಗೂ ಮಾಜಿ ಶಾಸಕ ಪಿ.ಎಚ್.ಪೂಜಾರ ಸಕ್ರಿ ಹೈಸ್ಕೂಲ್‌ನ ಮತಗಟ್ಟೆ ಸಂಖ್ಯೆ 118ರಲ್ಲಿ ಮತ ಚಲಾಯಿಸಿದರು.

ಮೊದಲ ಬಾರಿಯ ಝಲಕ್:

ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಸಾಕಷ್ಟು ಸಂಖ್ಯೆಯ ಯುವಕ–ಯುವತಿಯರು ಇದೇ ಮೊದಲ ಬಾರಿಗೆ ಮತ ಹಾಕಿ ಸಂಭ್ರಮಿಸಿದರು. ಗೆಳೆಯ–ಗೆಳತಿಯರು, ಸಹೋದರಿಯರೊಂದಿಗೆ ಮತಗಟ್ಟೆಗೆ ಬಂದವರು ಮತ ಹಾಕಿದ ದಿನವನ್ನು ಸ್ಮರಣೀಯವಾಗಿಸಿಕೊಳ್ಳಲು ಮತಗಟ್ಟೆ ಎದುರು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.

ಬಾಗಲಕೋಟೆಯ ಕಾಳಿದಾಸ ಕಾಲೇಜು, ಬಾದಾಮಿಯ ಕೇಂದ್ರ ಗ್ರಂಥಾಲಯ ಕಟ್ಟಡ ಹಾಗೂ ಮೇಣದ ಬಸದಿ ಎದುರಿನ ಪಿಂಕ್ ಮತಗಟ್ಟೆಗಳಲ್ಲಿ ಯುವ ಮತದಾರರ ಉತ್ಸಾಹ ಗರಿಗೆದರಿತ್ತು. ಮೇಣದ ಬಸದಿ ಎದುರಿನ ಪಿಂಕ್ ಮತಗಟ್ಟೆಗೆ ಬಂದವರನ್ನು ಅಲ್ಲಿಯ ಕಾಂಪೌಂಡ್ ಮೇಲೆ ಸಾಲುಗಟ್ಟಿದ್ದ ಮಂಗ್ಯಾಗಳು ಸಾಲುಗಟ್ಟಿದ್ದವು.

ಇವಿಎಂನಿಂದ ಮತದೃಢೀಕರಣ:

‘ಕಳೆದ ಬಾರಿ ಬಟನ್ ಒತ್ತಿ ಹಂಗೇ ಬಂದಿದ್ದೆವು. ಈ ಸಾರಿ ಅದೆಂತದೊ ಮೆಶಿನ್ ಹಾಕ್ಯಾರ. ನಾವು ಯಾರಿಗೆ ಓಟ್ ಹಾಕೀವಿ ಅಂತ ಅದರಲ್ಲಿ ತೋರುಸ್ತಿತ್ತು’ ಎಂದು ಬಾದಾಮಿಯ ಪಿಂಕ್‌ ಮತಗಟ್ಟೆಯಲ್ಲಿ ಹೇಮಾ ಸುಳ್ಳದ, ವಿಜಯಲಕ್ಷ್ಮಿ ಜವಳಿ ತಮ್ಮ ಮತಕ್ಕೆ ದೃಢೀಕರಣ ಸಿಕ್ಕಿದ್ದನ್ನು ಹೇಳಿಕೊಂಡರು. ಅಲ್ಲಿ ಮತ ಹಾಕಿದವರಿಗೆ ಚಾಕೊಲೆಟ್ ಕೊಟ್ಟು ಬಾಯಿ ಸಿಹಿ ಮಾಡಿ ಕಳುಹಿಸಲಾಯಿತು. ಪಿಂಕ್ ಮತಗಟ್ಟೆ ಎದುರು ತೂಗು ಹಾಕಿದ್ದ ಬಲೂನ್‌ಗಳನ್ನು ಕೊಡಿಸುವಂತೆ ಮಕ್ಕಳು ತಾಯಂದಿರಿಗೆ ರಚ್ಚೆ ಹಿಡಿದ ದೃಶ್ಯ ಕಂಡುಬಂದಿತು.

ಕೈಕೊಟ್ಟ ಮತಯಂತ್ರ:

ಬಾದಾಮಿಯ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 149ರಲ್ಲಿ ಬೆಳಿಗ್ಗೆ ಅರ್ಧ ಗಂಟೆ ಕಾಲ ಇವಿಎಂ ಯಂತ್ರ ಕೈಕೊಟ್ಟು ತೊಂದರೆಯಾಯಿತ. ತಾಂತ್ರಿಕ ತೊಂದರೆ ಸರಿಪಡಿಸಿ ಮತ್ತೆ ಮತದಾನ ಆರಂಭಿಸಲಾಯಿತು. ಬಾದಾಮಿ ತಾಲ್ಲೂಕಿನ ಬೇಲೂರಿನಲ್ಲೂ ಮಧ್ಯಾಹ್ನ ಒಂದು ತಾಸು ಇವಿಎಂ ಯಂತ್ರ ಕೈಕೊಟ್ಟಿತು. ಇದರಿಂದ ಕೆಲವು ಮತದಾರರು ಮನೆಗೆ ಮರಳಿದರು. ತಜ್ಞರು ಬಂದು ರಿಪೇರಿ ಮಾಡಿದ ನಂತರ ಮತ್ತೆ ಮತದಾನ ಪ್ರಕ್ರಿಯೆ ಆರಂಭಿಸಲಾಯಿತು.

ಮುಧೋಳದ ಆರ್‌ಎಂಜಿ ಶಾಲೆಯ ಮತಗಟ್ಟೆಯಲ್ಲಿ ಸಂಜೆ ಮತದಾನ ಪ್ರಕ್ರಿಯೆ ಮುಗಿಯುವ ವೇಳೆ ಪಿಆರ್‌ಒ ಒಬ್ಬರು ಪ್ರಜ್ಞೆ ತಪ್ಪಿ ಬಿದ್ದರು. ಆವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅಲ್ಲಲ್ಲಿ ನೀರಸ ಪ್ರತಿಕ್ರಿಯೆ:

ಬಾದಾಮಿ ತಾಲ್ಲೂಕಿನಲ್ಲಿದ್ದರೂ ಬೀಳಗಿ ಕ್ಷೇತ್ರದ ವ್ಯಾಪ್ತಿಗೆ ಬರುವ ಹಲಕುರ್ಕಿಯ ಮತಗಟ್ಟೆಯೊಂದರಲ್ಲಿ 765 ಮಂದಿ ಮತದಾರರು ಇದ್ದರೂ ಬೆಳಿಗ್ಗೆ 10.30ಕ್ಕೆ ಕೇವಲ 72 ಮಂದಿ ಮಾತ್ರ ಮತ ಹಾಕಿದ್ದರು. ಶಾಸಕರನ್ನು ಕಾಣಬೇಕಿದ್ದರೆ ಮಾತ್ರ ನಾವು ಬೀಳಗಿಗೆ ಹೋಗುತ್ತೇವೆ. ಉಳಿದಂತೆ ನಮಗೆ ಬಾದಾಮಿ ಹಾಗೂ ಬಾಗಲಕೋಟೆ ಜತೆಯೇ ಸಂಪರ್ಕ. ಇದು ಕೂಡ ನೀರಸ ಪ್ರತಿಕ್ರಿಯೆಗೆ ಕಾರಣವಾಗಿದೆ. ಶುಕ್ರವಾರ ಸಂಜೆ ಮಳೆಯಾದ ಕಾರಣ ಬಹುತೇಕರು ಬೆಳಿಗ್ಗೆಯೇ ಹೊಲಕ್ಕೆ ಹೋಗಿದ್ದಾರೆ. ಅದೂ ಕೂಡ ಮತಗಟ್ಟೆಯತ್ತ ಹೆಚ್ಚು ಜನರು ಸುಳಿಯದಿರುವುದಕ್ಕೆ ಕಾರಣ ಎಂದು ಸ್ಥಳೀಯರಾದ ಪ್ರಕಾಶ್ ಮಾಧ್ಯಮ ಮಿತ್ರರಿಗೆ ತಿಳಿಸಿದರು.

ಗುಳೇದಗುಡ್ಡದ ಭಂಡಾರಿ ಕಾಲೇಜಿನ ಮತಗಟ್ಟೆಯಲ್ಲೂ ಮಧ್ಯಾಹ್ನ ಮತದಾನ ಪ್ರಕ್ರಿಯೆ ನೀರಸವಾಗಿತ್ತು. ಬಾದಾಮಿ ಕ್ಷೇತ್ರದ ವ್ಯಾಪ್ತಿಯ ಕಟಗೇರಿಯಲ್ಲಿ ವಯೋವೃದ್ಧರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಕಟಗೇರಿಯ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಮತಗಟ್ಟೆಯಲ್ಲಿ 85 ವರ್ಷದ ನೀಲವ್ವ ಮೊಕಾಶಿ, ಯಲ್ಲವ್ವ ಮನ್ನೇರಿ, ಯಲ್ಲವ್ವ ಕಬ್ಬಲಗೇರಿ ಮೊಮ್ಮಕ್ಕಳು ಹಾಗೂ ಗ್ರಾಮಸ್ಥರ ಸಹಾಯದಿಂದ ಬಂದು ಮತ ಹಾಕಿದರು.

ಗಾಲಿ ಕುರ್ಚಿ ಬಳಕೆ, ಅಸಮಾಧಾನ:

ಮತಕೇಂದ್ರಗಳ ಎದುರು ಅಂಗವಿಕಲರ ನೆರವಿಗೆ ಇಡಲಾಗಿದ್ದ ಗಾಲಿ ಕುರ್ಚಿಗಳು ಕೆಲವು ಕಡೆ ಸರಿಯಾಗಿ ಬಳಕೆ ಆಗಲಿಲ್ಲ. ಕಟಗೇರಿ, ಗುಳೇದಗುಡ್ಡದಲ್ಲಿ ನಡೆಯಲು ಸಾಧ್ಯವಾಗದ ಹಿರಿಯರು, ವಯೋವೃದ್ಧರನ್ನು ಕರೆದೊಯ್ಯಲು ಬಳಸಲಾಯಿತು.

ನವನಗರದ ಸೆಕ್ಟರ್ ನಂ 12ರ ನಿವಾಸಿ ಪರಶುರಾಮ ತೆಗ್ಗಿ ಪಿಂಕ್ ಮತಗಟ್ಟೆಗೆ ಬಂದಿದ್ದು, ತ್ರಿಚಕ್ರ ವಾಹನದಲ್ಲಿ ಬಂದ ಅವರನ್ನು ಭದ್ರತಾ ಸಿಬ್ಬಂದಿ ಒಳಗೆ ಬಿಡಲಿಲ್ಲ. ತಾವು ಕೃತಕ ಕಾಲು ಅಳವಡಿಕೆ ಮಾಡಿಕೊಂಡಿರುವುದನ್ನು ತೋರಿಸಿದ ತೆಗ್ಗಿ ಒಳಗೆ ಪ್ರವೇಶ ಪಡೆದರು. ಆದರೆ ಯಾರೂ ಸಹಾಯಕ್ಕೆ ಬಾರದ ಕಾರಣ ಬಹಳ ಹೊತ್ತು ಹಾಗೆಯೇ ಕುಳಿತಿದ್ದರು. ಕೊನೆಗೆ ಮಾಧ್ಯಮ ಸಿಬ್ಬಂದಿ ಚುನಾವಣಾ ಅಧಿಕಾರಿಗೆ ಮಾಹಿತಿ ನೀಡಿದ ನಂತರ ಬಂದ ಸಿಬ್ಬಂದಿ ತೆಗ್ಗೆ ಒಳಗೆ ತೆರಳಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.