ADVERTISEMENT

ತಾರತಮ್ಯ ನಿವಾರಣೆಗೆ ಶೀಘ್ರ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:30 IST
Last Updated 7 ಫೆಬ್ರುವರಿ 2011, 9:30 IST

ಪಡಿತರ ಚೀಟಿ ವಿತರಣೆ : ಉದ್ಯೋಗ ಖಾತ್ರಿ ಯೋಜನೆ

ಹುನಗುಂದ : ತಾಲ್ಲೂಕಿನಲ್ಲಿ ನಡೆದ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳು ಹಾಗೂ ಪಡಿತರ ಚೀಟಿ ವಿತರಣೆಯಲ್ಲಿ ಭಾರಿ ಪ್ರಮಾಣದ  ಭ್ರ್ರಷ್ಟಾಚಾರ ಮತ್ತು ಚೀಟಿ ವಿತರಣೆ ತಾರತಮ್ಯ ನಡೆದಿದೆ. ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯ ಸಕಾಲಕ್ಕೆ ವಿತರಿಸಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಫಲಾನುಭವಿಗಳಿಗೆ ನ್ಯಾಯ ಒದಗಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ವಕೀಲ ಹಾಗೂ ಆಹಾರ ಹಕ್ಕು ಆಂದೋಲನ ರಾಜ್ಯ ಸಲಹೆಗಾರ ಕ್ಲಿಫ್ಟನ್ ಡಿ.ರೊಜಿಯೋ ಎಚ್ಚರಿಕೆ ನೀಡಿದರು.

ಅವರು ತಾಲ್ಲೂಕಿನ ಹುಲಗಿನಾಳ ಘನಮಠೇಶ್ವರ ಮಠದಲ್ಲಿ  ಫಿಯಾನ್ ಕರ್ನಾಟಕ ಹಾಗೂ ರೀಚ್ ಅಮೀನಗಡ ಶನಿವಾರ ಹಮ್ಮಿಕೊಂಡ ಆಹಾರ ಹಕ್ಕು ಆಂದೋಲನ ಸಂಘಟನೆಗಳ ಮೂಲಕ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ-2005 ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆ ಕುರಿತ ಒಂದು ದಿನದ ಜನಸಂವಾದದಲ್ಲಿ ಮಾತನಾಡಿದರು. 

ಜನಸಂವಾದಕ್ಕೆ ಬೇನಾಳ, ಗಂಗೂರ ಮತ್ತು ಕಲ್ಲಗೋನಾಳ ಗ್ರಾಮಗಳಿಂದ ಬಂದಿದ್ದ ನೂರಾರು ಫಲಾನುಭವಿಗಳು ತಮ್ಮ ಅನ್ಯಾಯವನ್ನು ಸಭೆಯಲ್ಲಿ ಹೇಳಿಕೊಂಡರು. ಉಡಚವ್ವ ಮಾದರ, ಹನಮವ್ವ ನಂದನೂರ, ಮಹಾಂತಪ್ಪ ಮೇಟಿ, ಮಲ್ಲಿಕಸಾಬ ಗಂಗೂರ, ಹುಚ್ಚಪ್ಪ ಹುಡೇದ, ಗೌರಮ್ಮ ಪಾಟೀಲ ಮುಂತಾದವರು ಮಾತನಾಡಿ, ಸರಕಾರದ ಸೌಲಭ್ಯಗಳು ತಮಗೆ ದೊರೆಯುತ್ತಿಲ್ಲ. ತಮ್ಮ ಸ್ಥಿತಿ ಹೀನಾಯವಾಗಿದೆ. ತಮಗೆ ಕೊಡುವ ಪಡಿತರದಲ್ಲಿ ಕಡಿಮೆ ಕೊಡುತ್ತಾರೆ.ನ್ಯಾಯಬೆಲೆ ಅಂಗಡಿಗಳು ಸರಿಯಾಗಿ  ತೆರೆಯುವುದಿಲ್ಲ. ದಬ್ಬಾಳಿಕೆ ಮಾಡುತ್ತಾರೆ. ಕೆಲಸ ಕೊಡದೇ ತಮ್ಮ ಹೆಸರಿನಲ್ಲಿ ಉದ್ಯೋಗ ಖಾತ್ರಿ ಬ್ಯಾಂಕ್ ಖಾತೆ ತೆರೆದು ಹಣ ಬಾಚಿಕೊಂಡಿದ್ದಾರೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳು ಶಾಮೀಲಾಗಿದ್ದಾರೆ   ಮತ್ತು ಬಡವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಹಿರೇಮಾಗಿ ಗ್ರಾಪಂ ಅಧ್ಯಕ್ಷೆ ಮೂಕವ್ವ ಬಸಪ್ಪ ಚಿತ್ತರಗಿ ಉದ್ಘಾಟಿಸಿದರು. ಹೆಡ್‌ಸ್ಟ್ರೀಮ್ಸ್ ಕಾರ್ಯಕ್ರಮ ಅಧಿಕಾರಿ ಸ್ವರ್ಣಾ ಭಟ್, ಬೆಂಗಳೂರಿನ  ಫಿಯಾನ್ ಕರ್ನಾಟಕ ಹಿರಿಯ ಹೋರಾಟಗಾರ ದಿಲೀಪ್ ಕಾಮತ್, ದಾವಣಗೆರೆ ಸ್ಪೂರ್ತಿ ಸಂಸ್ಥೆ ನಿರ್ದೇಶಕ ಕೆ.ಬಿ.ರೂಪಾ ನಾಯ್ಕ, ಪುಣೆ ಐಜಿಎಸ್‌ಎಸ್ ನಿರ್ಮಲ ಜಿ. ಜನರ ಅಹವಾಲನ್ನು ಒಂದೊಂದಾಗಿ ಆಲಿಸಿ ಸೂಕ್ತ ಉತ್ತರ ಕೊಡಲು ಅಧಿಕಾರಿಗಳಿಗೆ ಕೇಳಿದರು ಮತ್ತು ಸರಕಾರಕ್ಕೆ ಗಣಕಯಂತ್ರದ ಮೂಲಕ ನೀಡಿದ ಮಾಹಿತಿ ಸಂಪೂರ್ಣ ಬೋಗಸ್ ಇದ್ದು ಈ ಬಗ್ಗೆ ತಾವು ಜನರ ಮಾತು ಹಾಗೂ ದಾಖಲೆಗಳನ್ನು ನೋಡಿದಾಗ ಅರ್ಥವಾಗಿದೆ ಎಂದು ಖಾರವಾಗಿ ನುಡಿದರು.
 
ಸಭೆಯಲ್ಲಿ ಹಾಜರಿದ್ದ ತಾಪಂ ಇಓ ಆರ್.ವಿ.ತೋಟದ ಹಾಗೂ ಆರೋಗ್ಯ ನಿರೀಕ್ಷಕ ಎಸ್.ಪಿ.ಗಿರಣಿ ಮಾತನಾಡಿ ತಕ್ಷಣದ ಪರೀಶೀೀಲನೆ ಮಾಡಿ ಸೂಕ್ತ ಕ್ರಮ ಜರುಗಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿದರು. ರೀಚ್ ನಿರ್ದೇಶಕ ಜಿ.ಎನ್.ಸಿಂಹ  ನಿರೂಪಿಸಿದರು. ಕರಿಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರೀಚ್ ಸಂಯೋಜಕ ಸಂದೀಪ್ ಜೈನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.