ADVERTISEMENT

ಬಾದಾಮಿ: ಬಿರುಸಿನ ಮತದಾನ

- ಚಾಲುಕ್ಯರ ನಾಡಿನಲ್ಲಿ ಬಿರುಸಿನ ಮತದಾನ: ಮತಗಟ್ಟೆಗಳಲ್ಲಿ ಪುರುಷರ ನಿರುತ್ಸಾಹ

​ಪ್ರಜಾವಾಣಿ ವಾರ್ತೆ
Published 13 ಮೇ 2018, 10:57 IST
Last Updated 13 ಮೇ 2018, 10:57 IST
ಬಾದಾಮಿ ಸಮೀಪದ ಆಡಗಲ್‌ ಗ್ರಾಮದ ಮತಗಟ್ಟೆ 115ರಲ್ಲಿ ಮಹಿಳೆಯರು ಮತಹಾಕಲು ಸರದಿಯಲ್ಲಿ ನಿಂತಿದ್ದರು.
ಬಾದಾಮಿ ಸಮೀಪದ ಆಡಗಲ್‌ ಗ್ರಾಮದ ಮತಗಟ್ಟೆ 115ರಲ್ಲಿ ಮಹಿಳೆಯರು ಮತಹಾಕಲು ಸರದಿಯಲ್ಲಿ ನಿಂತಿದ್ದರು.   

ಬಾದಾಮಿ: ಐತಿಹಾಸಿಕ ಚಾಲುಕ್ಯರ ನಾಡಿನಲ್ಲಿ ವಿಧಾನಸಭಾ ಮತಕ್ಷೇತ್ರದ ಮತದಾನವು ಶನಿವಾರ ಬಿರುಸಿನಿಂದ ನಡೆಯಿತು. ಕೆಲವೆಡೆ ಮತಯಂತ್ರಗಳು ಕೈಕೊಟ್ಟದ್ದರಿಂದ ಮತದಾನಕ್ಕೆ ವಿಳಂಬವಾಯಿತು. ಎಲ್ಲಡೆ ಮತದಾನ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ ಮತಕೇಂದ್ರಗಳಲ್ಲಿ ಪುರುಷರಿಗಿಂದ ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದರು. ಪುರುಷ ಮತದಾರರ ಸಂಖ್ಯೆಯು ವಿರಳವಾಗಿತ್ತು. 1ಗಂಟೆಯ ನಂತರ ಮಧ್ಯಾಹ್ನದ ಬಿಸಿಲಿನಿಂದ ಮತದಾರರು ಮನೆಯಿಂದ ಹೊರ ಬರಲಿಲ್ಲ. ಮತ್ತೆ ನಾಲ್ಕು ಗಂಟೆಯಿಂದ ಬಿರುಸಿನ ಮತದಾನ ನಡೆಯಿತು.

ಅಂಗವಿಲರಿಗೆ ಮತ್ತು ವೃದ್ಧರಿಗೆ ಎಲ್ಲಾ ಮತಗಟ್ಟೆಯಲ್ಲಿ ವೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿತ್ತು. ಅಂಗವಿಲರು ಮತ್ತು ವೃದ್ಧರು ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿದರು. ನಂದಿಕೇಶ್ವರ ಗ್ರಾಮದಲ್ಲಿ 88 ವರ್ಷದ ಮಹಾಗುಂಡಪ್ಪ ಅಂಬಿಗೇರ ಹಾಗೂ ಆಡಗಲ್‌ನಲ್ಲಿ 90 ವರ್ಷದ ಕರಿಯವ್ವ ಕೊಳ್ಳನ್ನವರ ಮತ ಚಲಾಯಿಸಿದರು.

ADVERTISEMENT

ನಂದಿಕೇಶ್ವರ ಗ್ರಾಮದ ಮಹಾಗುಂಡಪ್ಪ 1952 ರಿಂದ ನಾನು ಮತಚಲಾಯಿಸುತ್ತಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು. ಆಗಿನ ಚುನಾವಣೆಗಳು ಒಬ್ಬರು ಹೇಳಿದರೆ ಸಾಕು ವಿಶ್ವಾಸದಿಂದ ಮತ ಹಾಕುತ್ತಿದ್ದೆವು. ಆದರೆ ಈಗಿನ ಚುನಾವಣೆ ಬೇರೆ ಎಂದರು.

ಪಿಂಕ್‌ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ನೇಮಿಸಲಾಗಿತ್ತು. ಬಾದಾಮಿ ಪಟ್ಟಣದಲ್ಲಿ ಎರಡು ಮತಗಟ್ಟೆಗಳನ್ನು ಆಕರ್ಷಕವಾಗಿ ರೂಪಿಸಲಾಗಿತ್ತು.

ಶಾಸಕ ಬಿ.ಬಿ. ಚಿಮ್ಮನಕಟ್ಟಿ ದಂಪತಿ ಮತ ಚಲಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲ್ಲುವ ಭರವಸೆ ವಕ್ತಪಡಿಸಿದರು.
ಸಂಸದ ಪಿ.ಸಿ. ಗದ್ದಿಗೌಡರ ಮತ್ತು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ದಂಪತಿ ಮತವನ್ನು ಚಲಾಯಿಸಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆಲುವು ನಿಶ್ಚಿತ ಎಂದರು.

ಬಾದಾಮಿ ಮತಕ್ಷೇತ್ರದಲ್ಲಿ ಎಲ್ಲೆಡೆ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಸಿಪಿಐ ಕೆ.ಎಸ್‌. ಹಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.