ADVERTISEMENT

‘ಬ್ರಾಹ್ಮಣರ ಸೋಲಿಸಲು ನೆರವಾಗಿದ್ದೀರಿ’; ಶಾಸಕ ಆನಂದ ನ್ಯಾಮಗೌಡ ಹೇಳಿಕೆಯ ವಿಡಿಯೊ

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಹೇಳಿಕೆಯ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 12:59 IST
Last Updated 14 ನವೆಂಬರ್ 2018, 12:59 IST
ಆನಂದ ನ್ಯಾಮಗೌಡ
ಆನಂದ ನ್ಯಾಮಗೌಡ   

ಬಾಗಲಕೋಟೆ: ಸಮಾರಂಭವೊಂದರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿರುವ ಜಮಖಂಡಿಯ ನೂತನ ಶಾಸಕ ಆನಂದ ನ್ಯಾಮಗೌಡ, ‘ಬ್ರಾಹ್ಮಣರೊಬ್ಬರನ್ನು ಸೋಲಿಸಲು ಸಿಕ್ಕ ಅವಕಾಶ ಬಳಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಮಖಂಡಿಯ ಅಬೂಬಕರ್ ದರ್ಗಾದಲ್ಲಿ ಭಾನುವಾರ ಮುಸ್ಲಿಮ್‌ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಆನಂದ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

‘ನಜೀರ್ ಅಣ್ಣ (ಕಾಂಗ್ರೆಸ್ ಮುಖಂಡ) ಹೇಳುತ್ತಿದ್ದರು. 1990ರಲ್ಲಿ ಸಿದ್ದು ನ್ಯಾಮಗೌಡ ಅವರು ರಾಮಕೃಷ್ಣ ಹೆಗಡೆ ಅವರನ್ನು,ಅದೂ ಒಬ್ಬ ಬ್ರಾಹ್ಮಣರನ್ನು ಸೋಲಿಸಿ ಇಡೀ ದೇಶದಲ್ಲಿಯೇ ಹೆಸರಾಗಿದ್ದರು. ಈ ಚುನಾವಣೆಯಲ್ಲಿ ಬ್ರಾಹ್ಮಣರೊಬ್ಬರನ್ನು ಸೊಲಿಸಲು ನನಗೂ ಒಂದು ಅವಕಾಶ ದೊರೆಯಿತು. ಅದರಲ್ಲೂ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲು ನೀವೆಲ್ಲಾ ನೆರವಾಗಿದ್ದೀರಿ’ ಎಂದು ಆನಂದ್ ಭಾಷಣದಲ್ಲಿ ಹೇಳಿರುವುದು ವಿಡಿಯೊದಲ್ಲಿದೆ.

ADVERTISEMENT

ತಿರುಚಿದ ವಿಡಿಯೊ:ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆನಂದ ನ್ಯಾಮಗೌಡ, ‘ಅದೊಂದು ತಿರುಚಿದ ವಿಡಿಯೊ, ಬ್ರಾಹ್ಮಣ ಸಮುದಾಯದವರನ್ನು ಸೋಲಿಸಿದ್ದೇನೆ ಎಂದು ಜಂಭಪಟ್ಟುಕೊಳ್ಳುವವನು ನಾನಲ್ಲ’ ಎಂದರು.

‘ನನಗಿಂತ ಮೊದಲು ಮಾತಾಡಿದವರು ಈ ವಿಚಾರ ಹೇಳಿದ್ದರು. ಅವರ ಹೇಳಿಕೆಗೆ ತಪ್ಪು ಅರ್ಥ ಬಾರದಂತೆ ಅದನ್ನು ಪುನರುಚ್ಛರಿಸಿ ಸ್ಪಷ್ಟನೆ ನೀಡಿದ್ದೇನೆ.ಸಮಾರಂಭದಲ್ಲಿ 3.5 ನಿಮಿಷ ಮಾತಾಡಿದ್ದೇನೆ. ಆದರೆ 29 ಸೆಕೆಂಡ್‌ನ ತಿರುಚಿದ ವಿಡಿಯೊ ಹರಿಯಬಿಟ್ಟಿದ್ದಾರೆ. ಈ ವಿಚಾರ ಬೆಳೆಸುವುದು ಇಷ್ಟವಿಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.