ADVERTISEMENT

ರಣಬಿಸಿಲಿನಲ್ಲಿ ಬಣ್ಣದ ಮಳೆ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 6:50 IST
Last Updated 22 ಮಾರ್ಚ್ 2011, 6:50 IST
ರಣಬಿಸಿಲಿನಲ್ಲಿ ಬಣ್ಣದ ಮಳೆ!
ರಣಬಿಸಿಲಿನಲ್ಲಿ ಬಣ್ಣದ ಮಳೆ!   

ಬಾಗಲಕೋಟೆ: ಮುಳುಗಡೆ ಖ್ಯಾತಿಯ ಬಾಗಲಕೋಟೆ ನಗರವು ಸಾಂಪ್ರದಾಯಿಕ ಹೋಳಿ ಆಚರಣೆಯ ಎರಡನೇ ದಿನವಾದ ಸೋಮವಾರ ಸಂಪೂರ್ಣವಾಗಿ ‘ಬಣ್ಣ’ದಲ್ಲಿ ಮುಳುಗಡೆಯಾಗಿತ್ತು. ಎರಡನೇ ದಿನದ ರಂಗಿನಾಟದಲ್ಲಿ ಜೈನಪೇಟೆ, ವೆಂಕಟಪೇಟೆ ಹಾಗೂ ಹಳಪೇಟೆಯ ಜನರು ಮಾತ್ರವಲ್ಲದೇ ಉಳಿದ ಓಣಿಗಳ ಸಾವಿರಾರು ಜನರು ಸಂಭ್ರಮದಿಂದ ಓಕುಳಿಯಾಡಿದರು.

ಹಲಗೆ ಮತ್ತು ಶಹನಾಯಿ ವಾದ್ಯವೈಭವ... ಗುರುತು ಸಿಗದಂತೆ ಮೈತುಂಬ ಬಣ್ಣ ಬಳೆದುಕೊಂಡು ಸಿನಿಮಾ ಹಾಡುಗಳಿಗೆ ಹಾಗೂ ಅಬ್ಬರದ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಯುವಕರ ಗುಂಪುಗಳು... ಪಿಚಕಾರಿ ಹಿಡಿದು ಕೇಕೆ ಹಾಕುತ್ತ ಸಾಗುತ್ತಿದ್ದ ಮಕ್ಕಳು...ರಂಗಿನಾಟಕ್ಕೆ ಕಳೆತಂದರು. ವಿಧಾನಸೌಧದ ಆವರಣದ, ರಾಜಕಾರಣಿಗಳ ಮನೆ ಕಂಪೌಂಡ್‌ನಲ್ಲಿ ಕಾಣಿಸುತ್ತಿದ್ದ ವಾಮಾಚಾರ ಪಿಡುಗು ಹಳಪೇಟೆ(ಮಡು)ಯಲ್ಲೂ ಕಂಡುಬಂತು.

ರಾಜ್ಯ ರಾಜಕೀಯದಲ್ಲಿ ವಾಕರಿಕೆ ತರಿಸಿರುವ ‘ವಾಮಾಚಾರ’ವನ್ನೇ ಹಳಪೇಟೆಯ ಯುವಕರ ತಂಡವು ಹಾಸ್ಯರೂಪಕವನ್ನಾಗಿ ಪ್ರದರ್ಶಿಸುವ ಮೂಲಕ ಜನರ ಮನರಂಜಿಸಿತು. ರಾಜಕೀಯ ಜಂಜಾಟವನ್ನು ಬದಿಗೊತ್ತಿದ ನಗರಸಭೆ ಸದಸ್ಯರು ನಗರವನದ ಬಳಿಯ ಪಂಪ್‌ಹೌಸ್ ಆವರಣದಲ್ಲಿ ರಂಗಿನಾಟದ ಮೂಲಕ ಗಮನಸೆಳೆದರು. ವಿಧಾನಪರಿಷತ್ ಸದಸ್ಯರು, ಬಿಜೆಪಿ ಮುಖಂಡರು ನಗರಸಭೆ ಸದಸ್ಯರ ಓಕುಳಿಗೆ ಸಾಥ್ ನೀಡಿದರು.

ಹಿರಿಯರು, ಕಿರಿಯರು ಎನ್ನದೇ ಜಾತಿಭೇದ ಮರೆತು ಗುಂಪು ಗುಂಪಾಗಿ ಬೀದಿಗಿಳಿದ ಜನರು ಪರಸ್ಪರ ಗುಲಾಲು ಎರಚುತ್ತ ಓಣಿ ಓಣಿಗಳನ್ನು ಸುತ್ತಾಡಿದರು. ಗುರುತು ಸಿಗಲಾರದಷ್ಟು ಬಣ್ಣ ಬಳಿದುಕೊಂಡಿದ್ದ ಪರಿಚಿತರು ಹಾಗೂ ಸ್ನೇಹಿತರು ಎದುರಿಗೆ ಬಂದಾಗ ಕೇಕೆ, ಸಿಳ್ಳೆಗಳಿಂದ ಸಂತಸ ವ್ಯಕ್ತಪಡಿಸುತ್ತಿದ್ದರು.

ಬಣ್ಣದ ‘ಮಳೆ’ಗಾಲ:

ಜೈನಪೇಟೆ, ವೆಂಕಟಪೇಟೆ ಹಾಗೂ ಹಳಪೇಟೆಯಿಂದ ಬಣ್ಣದ ನೀರಿನ ಬ್ಯಾರೆಲ್‌ಗಳನ್ನು ಹೇರಿಕೊಂಡು ಬಂಡಿಗಳು ಹೊರಟಾಗ ಎರಡನೇ ದಿನದ ‘ರಂಗ’ಸಂಭ್ರಮ ತಾರಕಕ್ಕೇರಿತು. ಕಿವಿಗಡಚ್ಕಿಕುವ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ಯುವಕರ ಗುಂಪುಗಳ ಮಧ್ಯೆ ಸಾಲಾಗಿ ಹೊರಟ ಬಣ್ಣದ ಬಂಡಿಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂಜೆ ವೇಳೆಗೆ ಬಸವೇಶ್ವರ ಕಾಲೇಜಿನ ಬಳಿ ಎದುರಾದಾಗ ಮುಳುಗಡೆ ನಗರದಲ್ಲಿ ರಣಬಿಸಿಲಿನಲ್ಲೂ ಬಣ್ಣದ ‘ಮಳೆ’ಗಾಲ!

ಬಂಡಿಗಳಲ್ಲಿ ಬ್ಯಾರೆಲ್‌ಗಳಲ್ಲಿನ ಬಣ್ಣದ ನೀರನ್ನು ಅರ್ಧ ಕತ್ತರಿಸಿದ ಪ್ಲ್ಯಾಸ್ಟಿಕ್ ಬಾಟಲಿಗಳಿಂದ ಮೊಗೆ ಮೊಗೆದು ಎದುರಿಗಿದ್ದವರತ್ತ ರಭಸದಿಂದ ಉಗ್ಗಿದಾಗ ಕೃತಕ ಮಳೆ ಸುರಿದ ಅನುಭವ. ಮೈ-ಮುಖಕ್ಕೆ ಮೆತ್ತಿಕೊಂಡಿರುವ ವಿವಿಧ ಬಗೆಯ ಬಣ್ಣವನ್ನು ಮನೆಗೆ ಹೋಗಿ ತೊಳೆಯುವುದಕ್ಕಿಂತ ಬಣ್ಣದ ಬಂಡಿ ಎದುರು ನಿಂತರೆ ಸಾಕು; ಬಣ್ಣ ತನ್ನಿಂದ ತಾನೇ ತೊಳೆದುಕೊಂಡು ಹೋಗುವಷ್ಟು ರಭಸದಿಂದ ನೀರು ಗೊಜ್ಜಲಾಗುತ್ತದೆ. ಅಷ್ಟೇ ಅಲ್ಲ ಕಂಠಪೂರ್ತಿ ಕುಡಿದವರ ಅಮಲು ಕೂಡ ಕಡಿಮೆಯಾಗುತ್ತದೆ.

ಜೈನಪೇಟೆಯ ಜನರು ತಮ್ಮ ಓಣಿಯ ಹತ್ತಾರು ಬಣ್ಣದ ಬಂಡಿಗಳನ್ನು ಕಟ್ಟಿಕೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಲ್ಲಭಭಾಯಿ ಚೌಕ, ಬಸವೇಶ್ವರ ವೃತ್ತದ ಮಾರ್ಗವಾಗಿ ಪುನಃ ಓಣಿಗೆ ವಾಪಸ್ಸಾದರು. ಅದೇ ರೀತಿ ಉಳಿದೆರಡು ಓಣಿಯವರು ಬಂಡಿಗಳನ್ನೇರಿ ನಗರ ಪ್ರದಕ್ಷಿಣೆ ಹಾಕಿದರು. ಮೂರು ಪೇಟೆಗಳ ಜನರು ಎರಡನೇ ದಿನದಂದು ಸಾಂಪ್ರದಾಯಿಕ ಓಕುಳಿಯಾಡಿದರು.
 
ಕೊನೆಯ ದಿನದಂದು ಓಕುಳಿ ಆಡಲಿರುವ ಹೊಸಪೇಟೆ ಓಣಿಯವರು ಬಣ್ಣದ ಬಂಡಿಗಳ ಮೆರವಣಿಗೆ ಬಳಿಕ ಸೋಗು ಪ್ರದರ್ಶಿಸುವ ಮೂಲಕ ಜನರಿಗೆ ಮೋಜು ನೀಡಿದರು. ಸಾಂಪ್ರದಾಯಿಕ ಹೋಳಿ ಹಬ್ಬದ ಕೊನೆಯ ದಿನವಾದ ಮಂಗಳವಾರ(ಮಾ.22) ಹೊಸಪೇಟೆಯ ಬಣ್ಣ ನಡೆಯಲಿದ್ದು, ನಗರದ ಎಲ್ಲ ಜನರು ಸಾಮೂಹಿಕ ರಂಗಿನಾಟದ ಮೂಲಕ ರಂಗಪಂಚಮಿ ಸಮಾರೋಪಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.