ADVERTISEMENT

ಸಡಗರದ ಸದಾಶಿವ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 9:20 IST
Last Updated 18 ಮಾರ್ಚ್ 2011, 9:20 IST
ಸಡಗರದ ಸದಾಶಿವ ರಥೋತ್ಸವ
ಸಡಗರದ ಸದಾಶಿವ ರಥೋತ್ಸವ   

ಕೆರೂರ: ಇಲ್ಲಿಗೆ ಸಮೀಪದ ಕಾಡರಕೊಪ್ಪ ಗುರು ಸದಾಶಿವನ ಮಹಾರಥೋತ್ಸವ ಸಹಸ್ರಾರು ಭಕ್ತಾದಿಗಳ ಹರ್ಷೋದ್ಘಾರದೊಂದಿಗೆ ಗುರುವಾರ ಗೋಧೂಳಿ ಮುಹೂರ್ತದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸುಗ್ಗಿಯ ಭರಾಟೆಯಿಂದ ಬಿಡುವು ಪಡೆದಿದ್ದ ರೈತಾಪಿ ಕುಟುಂಬಗಳು ಹೊಸ ದಿರಿಸು ತೊಟ್ಟು ಆರಾಧ್ಯ ದೈವ ಸದಾಶಿವ ಜಾತ್ರೋತ್ಸವಕ್ಕೆ ಸಡಗರ ಮೂಡಿಸಿದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಲಿಕಟ್ಟಿ ಗೌಡರ ಮನೆಯ ಆರತಿ, ಬಾಜಾ ಬಜಂತ್ರಿಗಳ ವೈಭವದೊಂದಿಗೆ ರಥದ ಕಳಶದ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖರು ಇದರಲ್ಲಿ ಪಾಲ್ಗೊಂಡಿದ್ದರು.

ಈರುಳ್ಳಿ ಬೆಳೆಯಲು ಪ್ರಸಿದ್ಧಿ ಪಡೆದ ಈ ಗ್ರಾಮದ ರಥೋತ್ಸವ ಕಾಲಕ್ಕೆ ಸಡಗರಕ್ಕೆ ಇಂಬು ಕೊಡಲೆಂಬಂತೆ ಕಿವಿಗಡಚಿಕ್ಕುವಂತೆ ಅಪಾರ ಪ್ರಮಾಣದ ಮದ್ದುಗಳನ್ನು ಸಿಡಿಸಲಾಯಿತು. ರಥಕ್ಕೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಹಾಗೂ ಬೆಂಡು ಬೆತ್ತಾಸ ತೂರಿ ತಮ್ಮ ಇಷ್ಟಾರ್ಥ ಪೂರೈಸಿಕೊಂಡರು.

ಜಾತ್ರೆಯಲ್ಲಿ ಮಕ್ಕಳ ಮನೋರಂಜನೆಗೆ ಹಾಕಿದ್ದ ತಿರುಗು ಕುರ್ಚಿ, ತೊಟ್ಟಿಲು ಮೇಲಾಟ ಹಾಗೂ ಬಲೂನ್, ಆಟಿಕೆ ವಸ್ತುಗಳ ವಹಿವಾಟು ಜೋರಾಗಿತ್ತು.ನಂತರ ಈ ಬಾರಿ ಅಜ್ಜನ ಭವಿಷ್ಯವಾಣಿಯಂತೆ ಅಧಿಕ ಮಳೆಯಾಗುವ ವಿಷಯ ಕೇಳಿ ನೇಗಿಲಯೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ದೇವಾಲಯ ಆವರಣದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಕೆರೂರ ಹಾಗೂ ಲೋಕಾಪೂರ ಪೊಲೀಸರು ರಥೋತ್ಸವ ಕಾಲಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.