ಹುನಗುಂದ : `ನಾವು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಸ್ವಂತ ಊರು ಮತ್ತು ಕಲಿಸಿದ ಗುರುಗಳನ್ನು ಯಾವತ್ತೂ ಮರೆಯಬಾರದು. ವಿದ್ಯಾರ್ಥಿ ಹಂತದಲ್ಲಿ ಉತ್ತಮ ಶಿಕ್ಷಣ ಹಾಗೂ ಮೌಲ್ಯಗಳನ್ನು ನೀಡಿದ ಶಿಕ್ಷಕ ಮತ್ತು ಸಮಾಜದ ಋಣವನ್ನು ದೊಡ್ಡ ವರಾದ ಮೇಲೆ ತೀರಿಸಬೇಕು `ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ ಡಾ.ಎಸ್.ಎ.ಕೋರಿ ಹೇಳಿದರು.
ತಾಲ್ಲೂಕಿನ ಕಳ್ಳಿಗುಡ್ಡ ಗ್ರಾಮದಲ್ಲಿ ನಡೆದ ಜನಾನುರಾಗಿ ಶಿಕ್ಷಕ ಅಮರಪ್ಪ ಆದಪ್ಪ ಕೋರಿ ಅವರ 21ನೇ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
`ತಮ್ಮ ತಂದೆ ಗ್ರಾಮದ ಎಲ್ಲ ಮಕ್ಕಳ ಶೈಕ್ಷಣಿಕ ಉನ್ನತಿಗೆ ಶ್ರಮಿಸಿದ್ದರು. ಅವರ ಆದರ್ಶದ ಬೆಳಕಿನ ಹಾದಿಯಲ್ಲಿ ತಾವು ನಡೆಯುತ್ತಿದ್ದೇವೆ~ ಎಂದು ಹೇಳಿದರು.ನಿವೃತ್ತ ಶಿಕ್ಷಕ ಎಸ್.ಪಿ.ಶೆಟ್ಟರ, ಮಕ್ಕಳು ಕಲಿಕೆಯೊಂದಿಗೆ ಉತ್ತಮ ಜೀವನ ಮೌಲ್ಯಗಳನ್ನೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯಅತಿಥಿಯಾದ ಹುನಗುಂದ ಸರ್ಕಾರಿ ಡಿ.ಇಡಿ.ಕಾಲೇಜ ಅಧೀಕ್ಷಕಿ ಲಲಿತಾ ಹೊಸಪ್ಯಾಟಿ ಮಾತನಾಡಿ, ಸತತ ಓದು, ಶ್ರದ್ಧೆ ಸಾಧನೆಯ ಮೆಟ್ಟಿಲುಗಳು. ಇಂತಹ ಓದಿನ ಬೆಳಕಿನ ಹಾದಿಯನ್ನು ತೋರಿದ ಕೋರಿ ಮಾಸ್ತರರು ನಿತ್ಯ ವಂದ್ಯರು. ಇಡೀ ಬದುಕಿನಲ್ಲಿ ಸಂಪತ್ತು ಗಳಿಸದೇ ಮಕ್ಕಳನ್ನು ಉನ್ನತ ಶಿಕ್ಷಣ ಕೊಡಿಸುವಂತಹ ಉತ್ತಮ ಕಾರ್ಯ ಮಾಡಿದ್ದರು ಎಂದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಶಿವಮೂರ್ತಿ, ಗ್ರಾಮದ ಗೂಳಪ್ಪ ನರಗುಂದ, ಅಂಬಿಗೇರ, ಶರಣಪ್ಪ ಮತ್ತು ವಕೀಲ ಕತ್ರಿ ಕೋರಿ ಮಾಸ್ತರರ ಸಾಧನೆಯ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿವಿಧ ಕಲಿಕೋಪಕರಣಗಳನ್ನು ವಿತರಿಸಿದರು. ಎಸ್.ಎನ್.ಹಾದಿಮನಿ ಸ್ವಾಗತಿಸಿದರು. ಎನ್.ಬಿ.ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಚ್.ಲೂತಿಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.