
ಬಾಗಲಕೋಟೆ: ‘ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಭ್ರಷ್ಟಾಚಾರ ಹೆಚ್ಚಿದೆ. ಕಾನೂನು ವ್ಯವಸ್ಥೆ ಕುಸಿದಿದೆ. ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ಗ್ಯಾರಂಟಿ ನೀಡಿ. ಅದರಲ್ಲೇ ಐದು ವರ್ಷಗಳ ಕಾಲಹರಣ ಮಾಡಲಾಗುತ್ತಿದೆ. ಭ್ರಷ್ಟಾಚಾರದಲ್ಲಿಯೂ ನಂ.1 ಆಗಿದೆ ಎಂದು ಕಾಂಗ್ರೆಸ್ ಮುಖಂಡರೇ ಖಾಸಗಿಯಾಗಿ ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರರೇ, ಈಗ ಭ್ರಷ್ಟಾಚಾರ ದುಪ್ಪಟ್ಟಾಗಿದೆ ಎಂದು ದೂರುತ್ತಿದ್ದಾರೆ’ ಎಂದರು.
‘ರಾಜ್ಯ ಸರ್ಕಾರವು ಆಡಳಿತದ ಎರಡೂವರೆ ವರ್ಷಗಳಲ್ಲಿ ಆಗಿದ್ದೇನೆ? ಮುಂದಿನ ಎರಡೂವರೆ ವರ್ಷಗಳಲ್ಲಿ ಏನು ಮಾಡಬೇಕು ಎಂಬ ನೀಲಿನಕ್ಷೆ ಇಲ್ಲ. ಜನರು ಪೂರ್ಣ ಬಹುಮತ ನೀಡಿದ್ದರೂ, ಅಧಿಕಾರಕ್ಕೆ ಕಿತ್ತಾಟ ಮಾಡುತ್ತಿದ್ದಾರೆ. ಸಂಪುಟ ಪುನರ್‌ರಚನೆ ವಿಷಯದಲ್ಲೂ ಒಂದು ವರ್ಷದಿಂದ ಕಿತ್ತಾಟ ನಡೆದಿದೆ’ ಎಂದು ಆರೋಪಿಸಿದರು.
‘ರೈತರು ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬೆಳೆ ಹಾನಿಗೆ ಪರಿಹಾರ ಘೋಷಿಸಲಾಗಿದೆ. ಆದರೆ, ರೈತರ ಖಾತೆ ಒಂದೇ ಒಂದು ರೂಪಾಯಿ ಜಮಾ ಆಗಿಲ್ಲ. ವೇತನ ಸಿಕ್ಕಿಲ್ಲ ಎಂದು ಗ್ರಂಥಪಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಯಡಿಯೂ ಅನುದಾನ ಬಿಡುಗಡೆಯಾಗುತ್ತಿಲ್ಲ. ಹಾಗಾದರೆ, ಹಣ ಎಲ್ಲಿ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.
‘ಬೆಂಗಳೂರು ಅಭಿವೃದ್ಧಿ ಕರ್ನಾಟಕದ ಅಭಿವೃದ್ಧಿಯಲ್ಲ. ಬೆಂಗಳೂರಿನಲ್ಲಿ ಭೂಮಿ ಕಬಳಿಸುವ ರಿಯಲ್ ಎಸ್ಟೇಟ್ ಕೆಲಸ ನಡೆದಿದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಟೀಕೆ ಮಾಡುತ್ತಿದ್ದಾರೆ’ ಎಂದರು.
‘ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ 31 ವಿಧೇಯಕಗಳನ್ನು ಮಂಡನೆ ಮಾಡಲಾಗುತ್ತಿದೆ. ವಿಧೇಯಕಗಳ ಅನುಮೋದನೆಗೆ ಬೆಂಗಳೂರಿನಲ್ಲಿ ವಿಶೇಷ ಅಧಿವೇಶನ ಕರೆಯಲಿ. ಇಲ್ಲಿ ಒಂದೇ ಒಂದು ವಿಧೇಯಕ ಮಂಡಿಸುವುದು ಬೇಡ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಎಂದು ಸಭಾಪತಿ ಅವರಿಗೆ ಪತ್ರ ಬರೆದಿದ್ದೇನೆ. ಕುಂದಾ ತಿಂದು ಹೋದರೆ ಆಯ್ತಾ’ ಎಂದು ಕೇಳಿದರು.
‘ಕಂದಾಯ ಇಲಾಖೆ ಅಧಿಕಾರಿಗಳು ಗೆಸ್ಟ್ ಹೌಸ್‌ನಲ್ಲಿ ಕುಳಿತು ವಸೂಲಿ ಮಾಡುತ್ತಿದ್ದಾರೆ. ಕೊಟ್ಟು ಬಂದವರು, ವಸೂಲಿ ಮಾಡುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುವವರು ಇಲ್ಲವಾಗಿದೆ. ಅತ್ಯಾಚಾರ, ಕೊಲೆಗಳ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಸರ್ಕಾರ ಇದೆಯಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.