ADVERTISEMENT

ಬಾಗಲಕೋಟೆ | ಶೇ.78 ರಷ್ಟು ಬಿತ್ತನೆ: ಈರುಳ್ಳಿ, ತೊಗರಿ, ಮೆಕ್ಕೆಜೋಳದತ್ತ ಚಿತ್ತ

ಪ್ರಕಾಶ ಬಾಳಕ್ಕನವರ
Published 28 ಜೂನ್ 2025, 4:39 IST
Last Updated 28 ಜೂನ್ 2025, 4:39 IST
ಬೆನಕಟ್ಟಿ ಗ್ರಾಮದ ರೈತ ಹನಮಂತ ಬಸರೀಕಟ್ಟಿ ತೊಗರಿ ಬಿತ್ತನೆ ಮಾಡುತ್ತಿರುವುದು.
ಬೆನಕಟ್ಟಿ ಗ್ರಾಮದ ರೈತ ಹನಮಂತ ಬಸರೀಕಟ್ಟಿ ತೊಗರಿ ಬಿತ್ತನೆ ಮಾಡುತ್ತಿರುವುದು.   

ರಾಂಪುರ: ಬಾಗಲಕೋಟೆ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಅಂತಿಮ ಹಂತಕ್ಕೆ ಬಂದಿದ್ದು, ಮಳೆರಾಯ ಎರಡು ದಿನ ಬಿಡುವು ನೀಡಿರುವುದರಿಂದ ಈಗ ಬಿತ್ತನೆ ಚುರುಕುಗೊಂಡಿದೆ.

ಮುಂಗಾರು ಪ್ರಾರಂಭಕ್ಕೂ ಮೊದಲು ಹಾಗೂ ಪ್ರಾರಂಭದ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆಗೆ ಬಹಳಷ್ಟು ಅನುಕೂಲವಾಗಿದೆ. ಪ್ರಮುಖ ಬೆಳೆಗಳಾದ ಸೂರ್ಯಕಾಂತಿ, ಗೋವಿನಜೋಳ, ಸಜ್ಜೆ, ತೊಗರಿ, ಹೆಸರು, ಹತ್ತಿ ಬಿತ್ತನೆ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಕೆಲವೆಡೆ ಗೋವಿನಜೋಳ, ಸಜ್ಜೆ, ಸೂರ್ಯಕಾಂತಿ, ಹೆಸರು ಬೆಳೆಗಳು ಚಿಗುರೊಡೆದಿದ್ದು, ರೈತರು ಎಡೆ ಹೊಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ಶಿರೂರ, ಬೇವೂರ ಹಾಗೂ ರಾಂಪುರ ಹೋಬಳಿಯ ಅನೇಕ ಗ್ರಾಮಗಳಲ್ಲಿ ರೈತರು ಈರುಳ್ಳಿ ಬಿತ್ತನೆ ಶುರು ಮಾಡಿದ್ದು, ಮಳೆ ಬಿಡುವು ಕೊಟ್ಟರೆ ಒಂದು ವಾರದೊಳಗೆ ಬಿತ್ತನೆ ಪೂರ್ಣಗೊಳ್ಳಲಿದೆ. ಶಿರೂರ, ಬೆನಕಟ್ಟಿ, ಮನ್ನಿಕಟ್ಟಿ, ಹಳ್ಳೂರ, ಭಗವತಿ, ಬೇವೂರ, ಕಿರಸೂರ, ಮುಗಳೊಳ್ಳಿ, ಬಿಲ್ ಕೆರೂರ ಹಾಗೂ ನಾಯನೇಗಲಿ ಭಾಗದ ಕೆಲವೆಡೆ ರೈತರು ಈರುಳ್ಳಿ ಬಿತ್ತನೆಗೆ ಹೆಚ್ಚು ಒತ್ತು ನೀಡಿದ್ದಾರೆ.

ADVERTISEMENT

ಕಳೆದ ವರ್ಷ ಈರುಳ್ಳಿಗೆ ಒಳ್ಳೆಯ ಬೆಲೆ ಸಿಕ್ಕಿದ್ದರಿಂದಾಗಿ ರೈತರು ಈ ಬಾರಿಯೂ ಅದೇ ನಿರೀಕ್ಷೆಯನ್ನಿಟ್ಟುಕೊಂಡು ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆಗೆ ಮುಂದಾಗಿದ್ದಾರೆ. ಮೆಣಸಿನಕಾಯಿ ಬೆಳೆಗೆ ಕಳೆದ ಬಾರಿ ನಿರೀಕ್ಷಿತ ಮಟ್ಟದ ಬೆಲೆ ಸಿಗದೇ ಹೋಗಿದ್ದರಿಂದ ಈ ಬಾರಿ ಬಹಳಷ್ಟು ಜನ ರೈತರು ಅದರಿಂದ ಹಿಂದೆ ಸರಿಯುತ್ತಿದ್ದಾರೆ.

ಮುಂಗಾರು ಹಂಗಾಮು: 26800 ಹೆಕ್ಟರ್ ಬಿತ್ತನೆ ಗುರಿ
ಈ ಬಾರಿ ತಾಲ್ಲೂಕಿನ ಮುಂಗಾರು ಹಂಗಾಮು ಬಿತ್ತನೆಯ ಗುರಿ 26800 ಹೆಕ್ಟರ್ ಆಗಿದ್ದು, ಇದರಲ್ಲಿ ಈಗಲೇ 21 ಸಾವಿರ ಹೆಕ್ಟೇರನಷ್ಟು ಬಿತ್ತನೆಯಾಗಿದೆ. ಈ ವರ್ಷ ತೊಗರಿಗೆ ರೈತರ ಬೇಡಿಕೆ ಸ್ವಲ್ಪ ಹೆಚ್ಚಿದ್ದು, 7500 ಹೆಕ್ಟರ್ ಗುರಿ ಹೊಂದಲಾಗಿದೆ. ಗೋವಿನಜೋಳಕ್ಕೆ 4200 ಹೆಕ್ಟರ್, ಸಜ್ಜೆ 2600 ಹೆಕ್ಟರ್, ಹೆಸರು 3 ಸಾವಿರ ಹೆಕ್ಟರ್, ಸೂರ್ಯಕಾಂತಿ 3600 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಬಹುತೇಕ ಈಗಾಗಲೇ ಶೇ.78 ರಷ್ಟು ಬಿತ್ತನೆ ಮುಗಿದಿದೆ.

ಈರುಳ್ಳಿಗೆ ಪ್ರಾಶಸ್ತ್ಯ:

ಈ ಬಾರಿ ಈರುಳ್ಳಿಗೆ ಹೆಚ್ಚು ಬೇಡಿಕೆ ಬಂದಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಇದಕ್ಕೆ ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿರುವುದು ಪ್ರಮುಖ ಕಾರಣವಾಗಿದೆ. ಮೆಣಸಿನಕಾಯಿ(ಚಿಲ್ಲಿ)ಬಿತ್ತನೆಗೆ ಮನಸ್ಸು ಮಾಡದೇ ಇರುವುದರಿಂದ ಆ ಪ್ರದೇಶದಲ್ಲೂ ಈರುಳ್ಳಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಬೆನಕಟ್ಟಿ ಗ್ರಾಮದ ರೈತ ಹನಮಂತ ಬಸರೀಕಟ್ಟಿ ತೊಗರಿ ಬಿತ್ತನೆ ಮಾಡುತ್ತಿರುವುದು.
ತಾಲ್ಲೂಕಿನಲ್ಲಿ ಈ ಬಾರಿ ಗೋವಿನಜೋಳ ಬಿತ್ತನೆ ಅಧಿಕವಾಗಿದ್ದು ಕಳೆದ ವರ್ಷಕ್ಕಿಂತ ದುಪ್ಪಟ್ಟು ಬೇಡಿಕೆ ಬಂದಿದೆ. ರೈತರು ಗೋವಿನಜೋಳ ಬೆಳೆಯಲು ಒಲುವು ತೋರಿರುವುದು ಸಹಜವಾಗಿದೆ.
ಮಂಜುನಾಥ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಬಾಗಲಕೋಟೆ
ಈರುಳ್ಳಿ ಅಧಿಕ ಖರ್ಚಿನ ಬೆಳೆಯಾಗಿದ್ದರೂ ಒಳ್ಳೆಯ ಬೆಲೆ ಸಿಕ್ಕರೆ ಅಧಿಕ ಲಾಭವಾಗುತ್ತದೆ. ಕಳೆದ ವರ್ಷ ಈರುಳ್ಳಿಯೇ ರೈತರ ಕೈ ಹಿಡಿಯಿತು. ಮೆಣಸಿನಕಾಯಿಗೆ ಬೆಲೆ ಸಿಗದೇ ನಷ್ಟ ಅನುಭವಿಸಿದೆವು.
ಮುದ್ದಣ್ಣ ಹಳ್ಳೂರ ಪ್ರಗತಿಪರ ರೈತ ಭಗವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.