
ಮುಧೋಳ: ಇವರು ಮಹಾರಾಷ್ಟ್ರ ರಾಜ್ಯದ ಸಂಭಾಜಿನಗರ ಜಿಲ್ಲೆಯ ಪೈಠಣ ತಾಲ್ಲೂಕಿನ ಥೇರಗಾಂವ ಗ್ರಾಮದವರು. ರಸ್ತೆಯ ಬದಿಯಲ್ಲೇ ಬದುಕು ಕಟ್ಟಿಕೊಂಡವರು. ಶ್ರಮಜೀವಿಗಳು, ಗಂಡು–ಹೆಣ್ಣು ಬೇಧವಿಲ್ಲದೇ ಕಠಿಣ ಕಬ್ಬಿಣದ ಕಾಯಕದ ಮೂಲಕ ಹೊಟ್ಟೆ ತುಂಬಿಸಿಕೊಳ್ಳುವವರು. ಆಡು ಭಾಷೆಯಲ್ಲಿ ಇವರನ್ನು ಬಯಲು ಕಂಬಾರರು ಎನ್ನುತ್ತಾರೆ.
ರೈತರಿಗೆ ಕೃಷಿಗೆ ಅಗತ್ಯವಾಗಿ ಬೇಕಾಗಿರುವ ಕುಡುಗೋಲು, ಕೊಡಲಿ, ಗುದ್ಲಿ, ಬಾಯಬಡಗ, ಕುರುಪಿ, ಕೊಯ್ತಾ ಮುಂತಾದವುಗಳನ್ನು ನಮ್ಮ ಕಣ್ಣ ಎದುರೇ ಮಾಡಿ ಕೊಡುತ್ತಾರೆ.
ಸ್ವಂತ ವಾಹನದಲ್ಲಿ ಮಹಾರಾಷ್ಟ್ರದಿಂದ ಬರುವ ಇವರು ಒಂದು ಊರಲ್ಲಿ ಎರಡರಿಂದ ಮೂರು ದಿನ ಉಳಿದುಕೊಳ್ಳುತ್ತಾರೆ. ಗ್ರಾಹಕರು ಸಿಗುವಂತಿದ್ದರೆ ಹೆಚ್ಚು ದಿನ ಇರುವುದೂ ಉಂಟು. ಗ್ರಾಮದಲ್ಲಿನ ಕಂಬಾರರಿಗಿಂತ ಕಡಿಮೆ ದುಡ್ಡು ಹಾಗೂ ಕಡಿಮೆ ಸಮಯದಲ್ಲಿ ಮಾಡಿಕೊಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುತ್ತಾರೆ. ಮತ್ತೆ ಮುಂದಿನ ಊರಿಗೆ ಪಯಣ ನಡೆಸುತ್ತಲೇ ಇರುತ್ತಾರೆ. ವರ್ಷವಿಡಿ ತಿರುಗಾಡುವ ಇವರ ಕಾಯಕಕ್ಕೆ ಹೋಳಿ ಹಬ್ಬದ ಸಮಯದಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ಬೇಡಿಕೆ ಕಡಿಮೆಯಾದಂತೆ ಹುಟ್ಟೂರಿಗೆ ಹಿಂದುರುಗುತ್ತಾರೆ.
ಮಹಾರಾಷ್ಟದ ಅರ್ಧ ಭಾಗ ಹಾಗೂ ಕರ್ನಾಟಕದ ಅರ್ಧ ಭಾಗ ಸುತ್ತುವ ಇವರಿಗೆ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ರೈತರಿಂದ ಉತ್ತೇಜನ ಹಾಗೂ ಲಾಭ ದೊರಕುತ್ತದೆ ಎಂದು ಅನೀಲ ಸಾಳುಂಕೆ, ಅನೀತಾ ಸಾಳುಂಕೆ ತಿಳಿಸಿದರು.
ಪತಿ ಕುಲುಮೆಯಲ್ಲಿದ್ದ ಕಾಯ್ದ ಕೆಂಪಾದ ಕಬ್ಬಿಣ ಹಿಡಿದುಕೊಂಡರೆ ಪತ್ನಿ ಬಲವಾದ ಸುತ್ತಿಗೆಯಿಂದ ಹೊಡೆಯುತ್ತ ಉಪಕರಣದ ಆಕಾರಕ್ಕೆ ತರುತ್ತಾರೆ. 15 ರಿಂದ 30 ನಿಮಿಷಗಳಲ್ಲಿ ಒಂದು ಉಪಕರಣ ತಯಾರಿಸುತ್ತಾರೆ. ಇದೇ ಕುಲುಮೆಯಲ್ಲಿ ಅಡುಗೆ ಕೂಡ ಮಾಡುತ್ತಾರೆ.
ಇಬ್ಬರೂ ದುಡಿದರೆ, ಸರಿಯಾಗಿ ಕೆಲಸ ಸಿಕ್ಕರೆ ಎಲ್ಲ ವೆಚ್ಚಗಳನ್ನು ತೆಗೆದು ದಿನಕ್ಕೆ ₹ 1 ಸಾವಿರ ಆದಾಯ ಬರುತ್ತದೆ.
‘ರಸ್ತೆ ಬದಿಯಲ್ಲಿ ಬದುಕು ಇರುವುದರಿಂದ ಸ್ಥಿರವಾಗಿ ಒಂದೆಡೆ ನಿಲ್ಲದೇ ಇರುವುದರಿಂದ ಮಕ್ಕಳನ್ನು ಶಿಕ್ಷಣಕ್ಕಾಗಿ ಗ್ರಾಮದಲ್ಲೇ ಬಿಟ್ಟು ಬಂದಿದ್ದೇವೆ. ನಮ್ಮ ತಾಯಿ ಪಾಲನೆ ಮಾಡುತ್ತಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ನಾವು ಮಕ್ಕಳಿಂದ ದೂರ ಇರಬೇಕಾಗಿದೆ’ ಎಂದು ವಿಷಾದ ವ್ಯಕ್ತ ಪಡಿಸುತ್ತಾರೆ.
‘ನಮಗೆ ಸ್ವಂತ ಸೂರು ಇಲ್ಲ. ಮನೆ ನೀಡಬೇಕು. ಉದ್ಯೋಗ ಮಾಡಲು ಸಾಲ ನೀಡಬೇಕು. ಎಲ್ಲ ಸರ್ಕಾರಿ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ’ ಎಂದು ಬೇಸರದಿಂದ ಹೇಳುತ್ತ ಕಾಯ್ದ ಕಬ್ಬಿಣಕ್ಕೆ ಸುತ್ತಿಗೆಯಿಂದ ಹೊಡೆಯುತ್ತ ತಮ್ಮ ಕಾಯಕದಲ್ಲಿ ತಲ್ಲೀನರಾದರು.