ADVERTISEMENT

ಬಾಗಲಕೋಟೆ: ಮಹಿಳೆ, ಮಕ್ಕಳ ರಕ್ಷಣೆಗೆ ಅಕ್ಕ ಪಡೆ

ಜಿಲ್ಲೆಯಲ್ಲಿ ಪಡೆ ಕಾರ್ಯಾರಂಭ; ಬೆಳಿಗ್ಗೆ 7 ರಿಂದ ರಾತ್ರಿ 8ರವರೆಗೆ ಗಸ್ತು:ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:06 IST
Last Updated 8 ಜನವರಿ 2026, 7:06 IST
ಬಾಗಲಕೋಟೆಯಲ್ಲಿ ಬುಧವಾರ ಅಕ್ಕ ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು
ಬಾಗಲಕೋಟೆಯಲ್ಲಿ ಬುಧವಾರ ಅಕ್ಕ ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು   
ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಸಂಕಷ್ಟಕ್ಕೆ ತ್ವರಿತ ಸ್ಪಂದನೆ | ವಿವಿಧ ಸ್ಥಳಗಳಲ್ಲಿ ಗಸ್ತು

ಬಾಗಲಕೋಟೆ: ದೌರ್ಜನ್ಯ, ಹಿಂಸೆ, ಶೋಷಣೆಗಳನ್ನು ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವ ಕಾರ್ಯವನ್ನು ಅಕ್ಕ ಪಡೆ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಬುಧವಾರ ಬಿಟಿಡಿಎ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಕ್ಕ ಪಡೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಬೀದರ್ ಜಿಲ್ಲೆಯಲ್ಲಿ ಗೃಹ ಇಲಾಖೆಯಿಂದ ರಚಿಸಲ್ಪಟ್ಟ ಅಕ್ಕ ಪಡೆ ಯಶಸ್ಸನ್ನು ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ರಾಜ್ಯ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ಅಕ್ಕ ಪಡೆಯನ್ನು ರಚಿಸಿ, ರಾಜ್ಯದಾದ್ಯಂತ ವಿಸ್ತರಿಸಿದೆ ಎಂದರು.

ಅಕ್ಕ ಪಡೆ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣ ಉತ್ತೇಜಿಸಲಿದೆ. ತರಬೇತಿ ಪಡೆದ ಅಕ್ಕ ಪಡೆ ತಂಡದ ಸದಸ್ಯರು ಸೂಕ್ಷ್ಮ ಪ್ರದೇಶಗಳಲ್ಲಿ ಪೆಟ್ರೋಲಿಂಗ್ ಮತ್ತು ಮಹಿಳೆಯರು, ಮಕ್ಕಳನ್ನೊಳಗೊಂಡ ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸಲಿದೆ ಎಂದರು.

ADVERTISEMENT

ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು, ಸಹಾಯವಾಣಿ ಮತ್ತು ವರದಿ ಮಾಡುವ ಕಾರ್ಯ ವಿಧಾನಗಳಂತಹ ವಿಷಯಗಳ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.

ಅಕ್ಕ ಪಡೆ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಬೆಳಿಗ್ಗೆ 7 ರಿಂದ ರಾತ್ರಿ 8ರವರೆಗೆ ಎರಡು ಪಾಳೆಯದಲ್ಲಿ ಕೆಲಸ ನಿರ್ವಹಿಸಲಿದೆ. ತಂಡದ ಸದಸ್ಯರು ಶಾಲೆ, ಕಾಲೇಜು, ಬಾಲಕಿಯರ, ಮಹಿಳಾ ವಸತಿ ನಿಲಯ, ಬಸ್, ರೈಲ್ವೆ ನಿಲ್ದಾಣ, ಸ್ಥಳೀಯ ಮಾರುಕಟ್ಟೆ, ಪ್ರೇಕ್ಷಣಿಯ ಸ್ಥಳಗಳು, ಇತರ ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ವಾಹನದಲ್ಲಿ ಸಂಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ. ಮನ್ನಿಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಪ್ರಭಾಕರ, ಹೋಮಗಾರ್ಡ್ ಜಿಲ್ಲಾ ಸಮಾಧೀಷ್ಟ ಎಚ್.ಆರ್.ಕಂಬಳಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವೀಣಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಯೋಜನೆ ನಿರ್ದೇಶಕ ಮಂಜುನಾಥ ಪರಸನ್ನವರ, ಸಿಡಿಪಿಒ ರಮೇಶ ಸೂಳಿಕೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.