
ಮುಧೋಳ: ‘ಡಾ.ಬಾಬಾಸಾಹೇಬ ಅಂಬೇಡ್ಕರ್ ವಿದ್ಯಾವಂತರಾಗಿದ್ದರು. ವಿದೇಶಗಳಲ್ಲಿ ಸೇವೆಯ ಆಹ್ವಾನವಿದ್ದರೂ ತಿರಸ್ಕರಿಸಿ ಭಾರತಕ್ಕೆ ಬಂದರು. ದೇಶದಲ್ಲಿ ಜೀವಿತ ಅವಧಿಯಲ್ಲಿ ಹಣ, ಆಸ್ತಿ ಮಾಡಲಿಲ್ಲ. ಅವರು ನಿಧನರಾದಾಗ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ ₹ 15 ಸಾವಿರ ಮಾತ್ರ ಇತ್ತು’ ಎಂದು ಡಾ.ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದರು.
ಅವರು ಶನಿವಾರ ಸಂಜೆ ನಗರದ ಹಿರೆಕೇರಿಯ ಸಂತೆ ಮೈದಾನದಲ್ಲಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಆಯೋಜಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
‘ದಲಿತರ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ, ಅವರು ಡಾಕ್ಟರ್, ಎಂಜಿನಿಯರ್, ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ನೌಕರರಾಗಿ ಕೆಲಸ ಮಾಡುವಂತೆ ಮಾಡಿರುವುದೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಮಾಡಿರುವ ಆಸ್ತಿ’ ಎಂದು ಹೇಳಿದರು.
‘ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾವೇ ಇದ್ದೇವೆ. ಕೆಲವರು ಸಂವಿಧಾನದ ಬಗ್ಗೆ ಆಗಾಗ ಮಾತನಾಡುತ್ತಿದ್ದಾರೆ. ಅವರಿಗೆ ಸಂವಿಧಾನ ಇಷ್ಟ ಇರದಿದ್ದರೆ ಅವರಿಗೆ ಸರಿ ಹೊಂದುವ ರಾಷ್ಟ್ರಗಳಿಗೆ ಹೋಗಬೇಕು. ಭಾರತದಲ್ಲಿ ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.
‘ಡಾ.ಬಾಬಾಸಾಹೇಬ ಅವರು ನೂರಾರು ನೋವು, ಅವಮಾನ ಅನುಭವಿಸಿ ಶಿಕ್ಷಣ ಪಡೆದರು. ಇಂದು ಪ್ರತಿ ಊರಲ್ಲಿ ಅವರಿಗೆ ಮೂರ್ತಿಗಳಿವೆ. ನಮ್ಮ ಮಕ್ಕಳು ಎಲ್ಲ ಸವಾಲುಗಳನ್ನು ಎದುರಿಸಿ ಶಿಕ್ಷಣವಂತರಾದಾಗ ಮಾತ್ರ ನಮ್ಮ ಉದ್ಧಾರ ಸಾಧ್ಯ. ಜಾತಿ, ಧರ್ಮಗಳನ್ನು ತಲೆಯಿಂದ ತೆಗೆಯಿರಿ. ನಾವು ಭಾರತೀಯರು ಎಂಬುದನ್ನು ಗರ್ವದಿಂದ ಹೇಳಿ’ ಎಂದರು.
ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಸೂನೀಲ ಕಂಬೋಗಿ ಮಾತನಾಡಿ, ‘ಡಾ.ಅಂಬೇಡ್ಕರ್ ಆಶಯದಂತೆ ನಡೆಯಲು ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಹುಟ್ಟಿಕೊಂಡಿದೆ. ಜಾತಿ, ಧರ್ಮ ನೋಡದೇ ನೊಂದವರ ದನಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದರು.
ರಾಜ್ಯ ಸಂಚಾಲಕ ಅನೀಲ ಬರಗಿ, ರಾಜ್ಯ ಘಟಕದ ಅಧ್ಯಕ್ಷ ಲವಿತ್ ಮೃತ್ರಿ, ಕೃಷ್ಣಪ್ಪ ಪೂಜೇರಿ, ಮಹೇಶ ಹುಗ್ಗಿ, ಪತ್ರಕರ್ತ ಉದಯ ಕುಲಕರ್ಣಿ, ರಕ್ಷಿತಾ ಮೇತ್ರಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರೀಡಾಪಟುಗಳನ್ನು ಗೌರವಿಸಲಾಯಿತು.
ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಯ ಕಾರ್ಯಾಗಾರವನ್ನು ಡಾ.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ವಿಜಯೋತ್ಸವದ ಸ್ವಾಭಿಮಾನದ ನಡಿಗೆ, ರಸಮಂಜರಿ, ಬೈಕ್ ರ್‍ಯಾಲಿ ಮುಂತಾದ ಕಾರ್ಯಕ್ರಮಗಳು ನಡೆದವು.
‘ಬ್ರಿಟಿಷರಿಂದ ಸಂವಿಧಾನ ಬರೆಸಲು ಇಚ್ಛಿಸಿದ್ದ ನೆಹರೂ’ ನೆಹರೂ ಮಹಾತ್ಮಾ ಗಾಂಧಿ ಸರ್ದಾರ್ ಪಟೇಲ ಅವರು ಭಾರತದ ಸಂವಿಧಾನವನ್ನು ಬ್ರಿಟಿಷರಿಂದ ಬರೆಸಲು ಇಚ್ಛಿಸಿದ್ದರು. ಆದರೆ ಬ್ರಿಟಿಷರು ಮಹಾ ಮೇಧಾವಿ ಡಾ. ಅಂಬೇಡ್ಕರ್ ಅವರಿಂದ ಸಂವಿಧಾನ ರಚಿತಗೊಳ್ಳುತ್ತದೆ ಎಂದು ಹೇಳಿದ್ದರು ಎಂದು ರಾಜರತ್ನ ಅಂಬೇಡ್ಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.