
ಬಾದಾಮಿ: ಚಾಲುಕ್ಯ ಉತ್ಸವದ ಸಂಭ್ರಮಕ್ಕೆ ಎಪಿಎಂಸಿ ಆವರಣದಲ್ಲಿ ಹಾಕಲಾಗಿರುವ ಇಮ್ಮಡಿ ಪುಲಿಕೇಶಿ ವೇದಿಕೆ ಸಜ್ಜುಗೊಂಡಿದೆ.
120 ಅಡಿ ಉದ್ದ ಹಾಗೂ 80 ಅಡಿ ಅಗಲದ ಇತಿಹಾಸ ಹಿನ್ನಲೆಯುಳ್ಳ ವೇದಿಕೆಯನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿತ್ತು. ವೇದಿಕೆಗೆ ಅಂತಿಮ ಟಚ್ ನೀಡಲಾಗುತ್ತಿತ್ತು. ಜ.19 ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕರಾದ ಜೆ.ಟಿ. ಪಾಟೀಲ, ಭೀಮಸೇನ ಚಿಮ್ಮನಕಟ್ಟಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯ್ತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಸಿದ್ಧತೆಗಳನ್ನು ಪರಿಶೀಲಿಸಿದರು.
ಬೆಳಿಗ್ಗೆ 10ಕ್ಕೆ ವಿವಿಧ ವೈಶಿಷ್ಟತೆಯ ಜಾನಪದ ವಾಹಿನಿ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 3 ರಿಂದ ಸಂಜೆ6ರವರೆಗೆ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಸಂಗೀತ, ಭಜನೆ, ಗೀಗೀ ಪದ, ಸುಗಮಸಂಗೀತ, ಭರತನಾಟ್ಯ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ಉತ್ಸವ ಉದ್ಘಾಟನೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಪುಲಿಕೇಶಿ ವೃತ್ತದಲ್ಲಿ ಇಮ್ಮಡಿ ಪುಲಿಕೇಶಿ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವರು. ಅಂಜುಮನ್ ಇಸ್ಲಾಂ ಸಮಿತಿಯ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಖಾಸಗಿ ಹೋಟೆಲ್ ಉದ್ಘಾಟನೆ, ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ನಂತರ ಚಾಲುಕ್ಯ ಉತ್ಸವ ವೇದಿಕೆಗೆ ಬರಲಿದ್ದಾರೆ.
ಜ.20 ರಂದು ಪಟ್ಟದಕಲ್ಲಿನ ವಿಕ್ರಮಾದಿತ್ಯ ವೇದಿಕೆಯಲ್ಲಿ ಮತ್ತು 21ರಂದು ಐಹೊಳೆಯ ಜಯಸಿಂಹ ವೇದಿಕೆಯಲ್ಲಿ ಚಾಲುಕ್ಯ ಉತ್ಸವ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.