ADVERTISEMENT

ಬಾದಾಮಿ | ಸಾವಯವ ಕೃಷಿಯಿಂದ ಸಮಗ್ರ ಬೆಳೆ ಬೆಳೆದ ರೈತ

ಎಸ್.ಎಂ.ಹಿರೇಮಠ
Published 11 ಏಪ್ರಿಲ್ 2025, 4:07 IST
Last Updated 11 ಏಪ್ರಿಲ್ 2025, 4:07 IST
ಬಾದಾಮಿ ಸಮೀಪದ ನೀಲಗುಂದ ಗ್ರಾಮದ ರೈತ ರೆಹಮಾನಸಾಬ್ ಜವಾರಿ ಬಾಳೆಯನ್ನು ಬೆಳೆದಿರುವರು.
ಬಾದಾಮಿ ಸಮೀಪದ ನೀಲಗುಂದ ಗ್ರಾಮದ ರೈತ ರೆಹಮಾನಸಾಬ್ ಜವಾರಿ ಬಾಳೆಯನ್ನು ಬೆಳೆದಿರುವರು.   

ಬಾದಾಮಿ : ಆಲದಕಟ್ಟಿ ಗ್ರಾಮದಿಂದ ನೀಲಗುಂದ ಗ್ರಾಮಕ್ಕೆ ಹೋಗುವಾಗ ಮಾರ್ಗಮಧ್ಯದಲ್ಲಿ ಎತ್ತರದ ತೆಂಗಿನ ಮರಗಳು, ಕಬ್ಬು, ಪೇರಲ, ಚಿಕ್ಕು, ಮಾವು, ಲಿಂಬೆ, ತರಕಾರಿ ವೈವಿಧ್ಯಮಯವಾದ ಬೆಳೆಗಳು ಮತ್ತು ಗಿಡಮರಗಳು ಹಸಿರಿನ ಸಿರಿಯಿಂದ ಕಂಗೊಳಿಸುತ್ತಿವೆ.

8 ಎಕರೆ ಕಲ್ಲುಮಡ್ಡಿಯನ್ನು ಸ್ವಚ್ಛಗೊಳಿಸಿ ಮಣ್ಣು ತುಂಬಿಸಿ ಹೊಲವನ್ನು ಹದ ಮಾಡಿ ಮೊದಲು ಮಳೆಯಾಶ್ರಿತ ಭೂಮಿಯಲ್ಲಿ ಸಜ್ಜೆ, ಶೇಂಗಾ, ತೊಗರಿ ಮತ್ತು ಜೋಳ ಬೆಳೆಯುತ್ತಿದ್ದ ರೈತ ರೆಹಮಾನಸಾಬ್ ಮುಲ್ಲನ್ನವರ ಮಲಪ್ರಭಾ ಎಡದಂಡೆ ನೀರಾವರಿ ಬಂದ ಮೇಲೆ ನೀರು ಸಾಲದಾದಾಗ ಕೊಳವೆಬಾವಿ ಕೊರೆಯಿಸಿ ಸಮಗ್ರಬೆಳೆಯನ್ನು ಬೆಳೆಯಲು ಆರಂಭಿಸಿದರು.

8 ಎಕರೆಯಲ್ಲಿ 5 ಎಕರೆ ಕಬ್ಬು, 2 ಎಕರೆ ಶೇಂಗಾ, 1 ಎಕರೆಯಲ್ಲಿ ಜವಾರಿ ತಳಿಯ ಬಾಳೆಯನ್ನು ಬೆಳೆದಿದ್ದಾರೆ.

ADVERTISEMENT

‘ಒಂದು ಎಕರೆ ಪ್ರದೇಶದಲ್ಲಿ 2014ರಲ್ಲಿ ಮಡಿಕಟ್ಟು ಮಾಡಿ 500 ಬಾಳೆ ಸಸಿಗಳನ್ನು ನೆಟ್ಟಿದ್ದಾರೆ. ಬಾಳೆಗೆ ಪ್ರತಿವರ್ಷ 6 ಟ್ರ್ಯಾಕ್ಟರ್ ಸಾವಯವ ಗೊಬ್ಬರ, ಔಷಧ, ಕಾರ್ಮಿಕರು ಸೇರಿದಂತೆ ಅಂದಾಜು ₹60 ಸಾವಿರ ವೆಚ್ಚವಾಗುತ್ತದೆ. ನೆಟ್ಟು ಒಂದು ವರ್ಷದ ನಂತರ ಇಳುವರಿ ಆರಂಭವಾಗುವುದು. ವರ್ಷಕ್ಕೆ ₹2 ಲಕ್ಷ ಆದಾಯ ಬರುತ್ತಿದೆ. ಜವಾರಿ ಬಾಳೆ ಬೆಳೆ ಇಳುವರಿ 15 ವರ್ಷದ ವರೆಗೆ ಬರುವುದು. ಜವಾರಿ ಬಾಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುವುದು’ ರೈತ ರೆಹಮಾನಸಾಬ್ ಮುಲ್ಲನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಲದ ಬದುವಿನಲ್ಲಿ 20 ತೆಂಗು, ಮಾವು , ಪೇರು, ಲಿಂಬೆ, ಚಿಕ್ಕು, ಹುಣಸೆ, ಕೆರಬೇವು ಸೇರಿ ಅಂದಾಜು ನೂರಕ್ಕೂ ಅಧಿಕ ಗಿಡಗಳಿವೆ. ಆಯಾ ಸೀಜನ್‌ನಲ್ಲಿ ಫಲ ದೊರೆಯುತ್ತದೆ. ಪ್ರತಿ ವರ್ಷ ಅಂದಾಜು ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದೆ. ಕಬ್ಬು ಕಟಾವು ಮಾಡಿದ ಕೂಡಲೇ ಮಧ್ಯದಲ್ಲಿ ಕೋತಂಬರಿ, ಪಾಲಕ, ಮೆಂತೆ, ಪುಂಡಿ, ಮೂಲಂಗಿ, ಹೀರೇಕಾಯಿ ಟೊಮೆಟೊ ಬೆಳೆಯಲಾಗುತ್ತಿದೆ. ಪ್ರತಿ ವಾರ ₹5 ಸಾವಿರದಿಂದ ₹10 ಸಾವಿರ ಅದಾಯ ಬರುತ್ತದೆ. ಕುಟುಂಬದ ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಲಿದೆ’ ಎಂದರು.

‘ಮನೆಯ ಜವಾಬ್ದಾರಿ ನನ್ನ ಮೇಲೆ ಇದ್ದಿದ್ದರಿಂದ ಸಾಲಿಗೆ ಹೋಗಲಿಲ್ಲ. 14-15 ವರ್ಷದವ ಇದ್ದಾಗ ಒಕ್ಕಲುತನ ಮಾಡಾಕ ಸುರು ಮಾಡಿದೆ. ಆವಾಗ ಮಳಿ ಆದರ ಬೆಳಿ, ಆಗದಿದ್ದರ ಬರ. ಈಗ ನೀರಾವರಿ ಮಾಡಿದ ಮ್ಯಾಲೆ ಯಾವುದೂ ಕಷ್ಟ ಇಲ್ಲ, ಮೂರು ಕೊಳವಿಬಾವಿ ಹಾಕಸೀನಿ. ಮಣ್ಣಿನಲ್ಲಿ ಮಣ್ಣಾಗಿ ದುಡಿದ್ರ ಭೂತಾಯಿ ನಮ್ಮನ್ನ ಕೈಬಿಡೋದಿಲ್ಲ’ ಎಂದು ರೆಹಮಾನಸಾಬ್ ಹೇಳಿದರು.

‘ಮಗ ಶರೀಫ್ ಡಿಗ್ರಿ ಮುಗಿಸ್ಯಾನ ಇಂದಿನ ದಿನಮಾನದಾಗ ನಮ್ಮಂತವರಿಗೆ ನೌಕರಿ ಸಿಗೂದು ಕಷ್ಟ ಐತಿ ಅಂತ ಒಕ್ಕಲತನಕ್ಕೆ ಹಚ್ಚೀನಿ. ಇಬ್ಬರೂ ಕೂಡಿ ಬಾಳಿನ ಬಂಡಿ ಸಾಗಿಸಿಗೊಂಡು ಹೊಂಟೀವಿ’ ಎಂದು ಸಂತಸ ವ್ಯಕ್ತಪಡಿಸಿದರು.

ಹೊಲದಲ್ಲಿ ಜಾನುವಾರುಗಳಿಂದ ವರ್ಷಕ್ಕೆ 10 ಟ್ರ್ಯಾಕ್ಟರ್ ಗೊಬ್ಬರ ಬರತ್ತ ಹಂದಿ ಕೋಳಿ ಗೊಬ್ಬರ ಖರೀದಿಸಿ ಬೆಳೆಗೆ ಹಾಕ್ತೀವಿ. ಸಂಪೂರ್ಣ ಸಾಯವ ಬೆಳೆ ಬೆಳಿತಿದಿವಿ
ರೆಹಮಾನಸಾಬ್ ಮುಲ್ಲನ್ನವರ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.