ADVERTISEMENT

ಅಭಿವೃದ್ಧಿಗೆ ಕಾದಿರುವ ಬಾದಾಮಿ ಕ್ಷೇತ: ಮುಗಿಯದ ಪ್ರವಾಹ ಸಂತ್ರಸ್ತರ ಗೋಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:49 IST
Last Updated 17 ಡಿಸೆಂಬರ್ 2025, 8:49 IST
ಬಾದಾಮಿ ಸಮೀಪದ ಬಾಚಿನಗುಡ್ಡ ಗ್ರಾಮದ ರಸ್ತೆಯ ಶಂಕರಲಿಂಗ ಗುಡಿಯ ಕಾಡಂಚಿನ ತಗಡಿನ ಶೆಡ್ಡಿನಲ್ಲಿ ವಾಸವಿರುವ ಜನರು
ಬಾದಾಮಿ ಸಮೀಪದ ಬಾಚಿನಗುಡ್ಡ ಗ್ರಾಮದ ರಸ್ತೆಯ ಶಂಕರಲಿಂಗ ಗುಡಿಯ ಕಾಡಂಚಿನ ತಗಡಿನ ಶೆಡ್ಡಿನಲ್ಲಿ ವಾಸವಿರುವ ಜನರು   

ಬಾದಾಮಿ: ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು ಸೇರಿದಂತೆ ತಾಲ್ಲೂಕಿನ ವಿವಿಧ ಸ್ಥಳಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿವೆ.

ಅನುದಾನಕ್ಕಾಗಿ ಕಾದಿರುವ ಬನಶಂಕರಿ ಕನ್ನಡ ಹಂಪಿ ವಿವಿ ಶಾಖೆ, ಬತ್ತಿರುವ ಕೆಂದೂರ ಕೆರೆ, ನೆರೆ ಪ್ರವಾಹದಿಂದ ಸ್ಥಳಾಂತರಗೊಂಡ ಸೌಲಭ್ಯಗಳಿಂದ ವಂಚಿತ ಆಸರೆ ಬಡಾವಣೆಗಳ ಸಂತ್ರಸ್ತರು, ಪಟ್ಟಣದ 96 ಮನೆಗಳ ಸ್ಥಳಾಂತರ, ಹದಗೆಟ್ಟ ರಸ್ತೆ, ಜೆಜೆಎಂ ಕಳಪೆ ಕಾಮಗಾರಿ, ಬನಶಂಕರಿ ದೇವಾಲಯದ ಹಳ್ಳಕ್ಕೆ ಮತ್ತು ಪುಷ್ಕರಣಿಗೆ ಬರುವ ಬಾದಾಮಿ ಚರಂಡಿ ನೀರು ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳು, ಏಳು ವರ್ಷಗಳಿಂದ ತಗಡಿನ ಶೆಟ್ಟಿನಲ್ಲಿಯೇ ವಾಸಿಸುತ್ತಿರುವ ಸಂತ್ರಸ್ತರು, ಪಟ್ಟದಕಲ್ಲಿನ ಟೂರಿಸಂ ಪ್ಲಾಜಾ, ಬಾದಾಮಿಯ ಪಾರ್ಕಿಂಗ್ ಪ್ಲಾಜಾ, ಬನಶಂಕರಿಯ ಸ್ಟಾರ್ ಹೋಟೆಲ್ ನಿರ್ಮಾಣ ನನೆಗುದಿಗೆ ಬಿದ್ದಿವೆ.

ADVERTISEMENT

2009 ಮತ್ತು 2019ರಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ನದಿ ದಂಡೆಯ 22ಕ್ಕೂ ಅಧಿಕ ಗ್ರಾಮಗಳ ಜನರ ಬದುಕು ನೀರಿನಲ್ಲಿ ಕೊಚ್ಚಿಹೋಗಿತ್ತು. ಸರ್ಕಾರ ಮತ್ತು ದಾನಿಗಳ ಸಹಭಾಗಿತ್ವದಲ್ಲಿ ನಿರ್ಮಿಸಿದ ಆಸರೆ ಮನೆಗಳಿಗೆ ಜನರು ಸ್ಥಳಾಂತರಗೊಂಡಿದ್ದಾರೆ. ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಕೆಲವರಿಗೆ ಹಕ್ಕು ಪತ್ರ ಕೊಟ್ಟಿಲ್ಲ ಎಂಬ ಕೂಗಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.

ಆಸರೆ ಬಡಾವಣೆಯಲ್ಲಿ ಮುಳ್ಳಿನ ಜಾಲಿ ಗಿಡ ಮತ್ತಿತರ ಗಿಡಗಳು ಬೆಳೆದು ತೊಂದರೆಯಾಗುತ್ತಿದೆ. ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡದ ಕೊರತೆ, ಸ್ವಚ್ಛತೆ, ಆರೋಗ್ಯ ಮತ್ತು ವಿದ್ಯುತ್ ದೀಪದ ಕೊರತೆಯಿಂದ ಸಂತ್ರಸ್ತರು ನಲುಗಿ ಹೋಗಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಮತ ಪಡೆಯಲು ಬರುವ ರಾಜಕೀಯ ನಾಕರು, ಎಲ್ಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ಕೋಡುತ್ತಾರೆ. ನಂತರ ಮರಳಿ ನಮ್ಮೂರಿಗೆ ಬಂದಿಲ್ಲ’ ಎಂದು ಬಡಾವಣೆ ಜನರು ಬೇಸರ ವ್ಯಕ್ತಪಡಿಸಿದರು. 

‘ಪಟ್ಟದಕಲ್ಲಿನಲ್ಲಿ 2019ರಲ್ಲಿ ನೂರಕ್ಕೂ ಅಧಿಕ ಮನೆಗಳು ಪ್ರವಾಹದಲ್ಲಿ ಮುಳಗಿದ್ದವು. ಕೆಲವು ಸಂತ್ರಸ್ತರು ಆರೋಗ್ಯ ಕೇಂದ್ರದ ಹಿಂದೆ ತಗಡಿನ ಶೆಡ್ಡಿನಲ್ಲಿ, ಇನ್ನು ಕೆಲವರು ಬಾಚಿನಗುಡ್ಡ ಗ್ರಾಮದ ರಸ್ತೆಯಿಂದ 3 ಕಿ.ಮೀ ದೂರದ ಶಂಕರಲಿಂಗ ಗುಡಿ ಬೆಟ್ಟದ ಸಮೀಪ ಶೆಡ್ಡಿನಲ್ಲಿ ಏಳು ವರ್ಷಗಳಿಂದ ವಾಸವಾಗಿದ್ದಾರೆ. ಇಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೂ ಬಂದಿಲ್ಲ’ ಎಂದು ಶಂಕ್ರಮ್ಮ ದೂರಿದರು.

‘ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಜೆಜೆಎಂ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಕಾಮಗಾರಿ ಕಳಪೆಯಾಗಿದೆ. ಗ್ರಾಮಸ್ಥರು ಮೌಖಿಕವಾಗಿ ತಿಳಿಸಿ, ಮನವಿ ಕೊಟ್ಟರೂ ಅಧಿಕಾರಿಗಳು ಸರಿಯಾಗಿ ಸ್ಫಂದಿಸುತ್ತಿಲ್ಲ’ ಎಂದು ಪಟ್ಟದಕಲ್ಲು ಗ್ರಾಮದ ಮುತ್ತಣ್ಣ ಹೇಳಿದರು.

‘2023ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ, ಬಾದಾಮಿ ಮತಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕೈಗೊಂಡು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ’ ಎಂದು ಭರವಸೆ ನೀಡಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿಯಾದ ಮೇಲೆ ಒಮ್ಮೆಯೂ ಕ್ಷೇತ್ರಕ್ಕೆ ಅವರು ಬಂದಿಲ್ಲ.

‘ಬಾದಾಮಿ ಪ್ರವಾಸಿ ತಾಣದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಅವರಿಗೆ ಸಾಕಷ್ಟು ಮನವಿ ಕಳಿಸಿದೆ. ಯಾವುದೇ ಅಭಿವೃದ್ದಿ ಆಗಿಲ್ಲ’ ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ತಿಳಿಸಿದರು.

ಬಾದಾಮಿ ಸಮೀಪದ ಆಡಗಲ್ ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ಬಾರದ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.