ಬಾದಾಮಿ: ‘ಹಿರಿಯ ನಾಗರಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲು ಡಿ. 16 ರಂದು ಬೆಳಿಗ್ಗೆ 10ಕ್ಕೆ ಬೆಳಗಾವಿಯಲ್ಲಿ ಹಿರಿಯ ನಾಗರಿಕರ ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ರಾಜ್ಯ ಕಾರ್ಯದರ್ಶಿ ಬಿ.ಪಿ.ಹಳ್ಳೂರ ತಿಳಿಸಿದರು.
‘ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿ-ಬೆಂಗಳೂರು ಆಶ್ರಯದಲ್ಲಿ ಬೆಳಗಾವಿ ಅಧಿವೇಶನದ ಹೊರಗೆ ಧರಣಿ ನಡೆಯಲಿದೆ’ ಎಂದು ಸೋಮವಾರ ಪತ್ರಕರ್ತರಿಗೆ ತಿಳಿಸಿದರು.
‘ಹಿರಿಯರ ಆಸ್ತಿ, ಜೀವ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯಲ್ಲಿ ಅವಶ್ಯವಾದ ವೃದ್ಧಾಪ್ಯ ವೇತನ ನೀಡುವುದು ಸರ್ಕಾರದ ಕರ್ತವ್ಯ. ಹಿರಿಯ ನಾಗರಿಕರ ಕೆಲವು ಸೌಲಭ್ಯಗಳನ್ನು ಸರ್ಕಾರ ಮೊಟಕುಗೊಳಿಸಿ ಹಿರಿಯರನ್ನು ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಪ್ರತಿ ವರ್ಷ ಅ. 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮಾಡಬೇಕಿತ್ತು. ಆದರೆ ಈ ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ನ. 28 ರಂದು ಆಚರಿಸಿದ್ದಾರೆ. ಅರ್ಜಿ ಸಲ್ಲಿಸಿದ ಸಂಘ– ಸಂಸ್ಥೆಯ ಅರ್ಜಿಯನ್ನು ಸರಿಯಾಗಿ ಪರಿಶೀಲಿಸದೆ ತಮಗೆ ಬೇಕಾದ ಸಂಘಕ್ಕೆ ಪ್ರಶಸ್ತಿ ನೀಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ರಾಜ್ಯ ಸಂಚಾಲಕ ಆರ್.ಕೆ. ಮಠಪತಿ ಮತ್ತು ರಾಜ್ಯದ ಪದಾಧಿಕಾರಿಗಳು ಆಗಮಿಸುವರು’ ಎಂದು ತಿಳಿಸಿದರು.
ಹಿರಿಯ ನಾಗರಿಕರಾದ ಸಿದ್ದಣ್ಣ ಶಿವನಗುತ್ತಿ, ಎನ್.ಎಸ್. ಬೊಮ್ಮನಗೌಡ್ರ, ಬಿ.ಎಸ್. ಮಠಪತಿ, ಎಂ.ಪಿ. ಪಾಟೀಲ, ವಿಠ್ಠಲಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.