ಬಾದಾಮಿ: ಪಟ್ಟಣದ ಹೊರವಲಯದಲ್ಲಿರುವ ಪುರಸಭೆಯ ಘನತ್ಯಾಜ್ಯ ಘಟಕದ ಕಾರ್ಯನಿರ್ವಹಣೆ ಸಂಪೂರ್ಣ ಸ್ಥಗಿತವಾಗಿದೆ. ಕಟ್ಟಡಗಳು ಜಾಲಿ ಕಂಟಿಗಳಲ್ಲಿ ಮರೆಯಾಗುತ್ತಿವೆ.
ಕೇಂದ್ರ ಸರ್ಕಾರದ ಹೃದಯ ಯೋಜನೆಯಲ್ಲಿ ಅಂದಾಜು ₹ 1.80 ಕೋಟಿಯನ್ನು ಘನತ್ಯಾಜ್ಯ ಘಟಕದ ಕಟ್ಟಡ, ಕಸ ಸಾಗಿಸುವ ವಾಹನ ಮತ್ತು ವಿವಿಧ ಪರಿಕರಗಳ ಖರೀದಿಗೆ ವೆಚ್ಚ ಮಾಡಲಾಗಿದೆ.
2021ರಲ್ಲಿ ತ್ಯಾಜ್ಯ ಘಟಕ ಆರಂಭವಾಗಿತ್ತು. ಎರಡು ವರ್ಷ ಹಸಿ ಮತ್ತು ಒಣ ಕಸ ಬೇರ್ಪಡಿಸುವ ವಾಹನಗಳು ಚಾಲುಕ್ಯ ನಗರ ಮತ್ತು ಆನಂದ ನಗರದ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಿದವು. ತ್ಯಾಜ್ಯ ಘಟಕಗಳಲ್ಲಿ ಈ ಕಸವನ್ನು ಸಂಗ್ರಹ ಮಾಡಲಾಗುತ್ತಿತ್ತು. 15 ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತ್ಯಾಜ್ಯ ಘಟಕ ಬಂದ್ ಆಗಿ ಬಯೊಗ್ಯಾಸ್ ಘಟಕ ಮತ್ತು ಜನರೇಟರ್ ತುಕ್ಕು ಹಿಡಿಯುತ್ತಿವೆ. ಇಡೀ ಕಟ್ಟಡ ಪಾಳು ಬಿದ್ದು ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆರಂಭದಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ಎರೆಹುಳು ಗೊಬ್ಬರವನ್ನೂ ತಯಾರಿಸಲಾಗುತ್ತಿತ್ತು. ಈಗ ಗೊಬ್ಬರದ ಘಟಕಗಳು ಖಾಲಿಯಾಗಿವೆ.
‘ವಾರ್ಡ್‌ಗಳಲ್ಲಿ ವಾಹನಗಳು ಬರುತ್ತಿವೆ. ವಾಹನಗಳ ಧ್ವನಿವರ್ಧಕದ ಮೂಲಕ ಹಸಿ ಕಸ ಮತ್ತು ಒಣ ಕಸ ಬೇರೆ ಹಾಕಿ ಎಂದು ಹೇಳಲಾಗುತ್ತಿದೆ. ಆದರೆ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುತ್ತಿಲ್ಲ ಹಾಗೆಯೇ ಕಸವನ್ನು ಹಾಕುತ್ತೇವೆ ’ ಎಂದು ಆನಂದ ನಗರದ ಮಹಿಳೆ ಪರಿಮಳಾ ಹೇಳಿದರು.
‘ಕೇಂದ್ರ ಸರ್ಕಾರದಿಂದ ಅನುದಾನ ಬಂದರೂ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ. ಅಭಿವೃದ್ಧಿ ಕಾರ್ಯಗಳು ಜನರಿಗೆ ಉಪಯೋಗಕ್ಕೆ ಬಾರದಂತಾಗಿದೆ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಹೇಳಿದರು.
‘ಪುರಸಭೆ ಅಧ್ಯಕ್ಷರಿಗೆ ಮತ್ತು ಮುಖ್ಯಾಧಿಕಾರಿಗೆ ಹಲವು ಬಾರಿ ಘಟಕದ ಆರಂಭದ ಬಗ್ಗೆ ಮೌಖಿಕವಾಗಿ ಮತ್ತು ಮನವಿ ಮೂಲಕ ಅನೇಕ ಬಾರಿ ತಿಳಿಸಿದರೂ ತ್ಯಾಜ್ಯ ಘಟಕ ಸರಿಯಾದ ಕಾರ್ಯನಿರ್ವಹಣೆ ಆಗುತ್ತಿಲ್ಲ’ ಎಂದು ಅವರು ಆರೋಪಿಸಿದರು.
ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದಾಗ ಮುಂದಿನ ಬಾಗಿಲು ಹಾಕಿ ರಬ್ಬರ್‌ನಿಂದ ಸುತ್ತಿ ಬಂದ್ ಮಾಡಲಾಗಿತ್ತು. ತ್ಯಾಜ್ಯ ಘಟಕದಲ್ಲೂ ಚಟುವಟಿಕೆ ಕಂಡು ಬರಲಿಲ್ಲ. ಯಾರೊಬ್ಬರೂ ಕಂಡು ಬರಲಿಲ್ಲ.
ಕೇಂದ್ರದ ಹೃದಯ ಯೋಜನೆಯಿಂದ ನಿರ್ಮಿಸಲಾದ ತ್ಯಾಜ್ಯ ಘಟಕವನ್ನು ಪುನರಾರಂಭಿಸಲಾಗುವುದು.– ಪಾಂಡಪ್ಪ ಕಟ್ಟಿಮನಿ, ಅಧ್ಯಕ್ಷ ಪುರಸಭೆ ಬಾದಾಮಿ
‘ನಿತ್ಯ 11 ಟನ್ ಕಸ ಸಂಗ್ರಹ’
‘ತ್ಯಾಜ್ಯ ಘಟಕದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಕೊಡಲಾಗಿತ್ತು. ವರ್ಷದಿಂದ ಸ್ಥಗಿತವಾಗಿದೆ. ಪಟ್ಟಣದಿಂದ ನಿತ್ಯ ಆರೂವರೆ ಟನ್ ಹಸಿ ಕಸ ಮತ್ತು ನಾಲ್ಕೂವರೆ ಟನ್ ಒಣ ಕಸ ಸಂಗ್ರಹವಾಗುತ್ತದೆ. ಹಸಿ ಕಸವನ್ನು ಗುಂಡಿಯಲ್ಲಿ ಹಾಕಿ ಗೊಬ್ಬರ ತಯಾರಿಸಲಾಗುತ್ತಿದೆ’ ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಪ್ರವೀಣ ಕಂಬಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.