
ಬಾದಾಮಿ: ಡಿಸೆಂಬರ್ ಕೊನೆಯ ವಾರದಲ್ಲಿ ಚಾಲುಕ್ಯರ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡು ದಿನೇ ದಿನೇ ಹೆಚ್ಚಾಗುತ್ತಿದೆ. ಮೇಣಬಸದಿಗೆ ಶನಿವಾರ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸಿದರು.
ಮೇಣಬಸದಿ ಆವರಣವು ಪ್ರವಾಸಿ ವಾಹನಗಳಿಂದ ಭರ್ತಿಯಾಗಿತ್ತು. ಪುಲಿಕೇಶಿ ವೃತ್ತದಿಂದ ಎಪಿಎಂಸಿವರೆಗೆ ನೂರಾರು ವಾಹನಗಳು ರಸ್ತೆಯಲ್ಲಿ ನಿಂತರೆ ಕೆಲ ವಾಹನಗಳು ಎಪಿಎಂಸಿ ಆವರಣದಲ್ಲಿ ನಿಲುಗಡೆ ಮಾಡಿದ್ದು ಕಂಡು ಬಂದಿತು. ಎಪಿಎಂಸಿ ಆವರಣದಲ್ಲಿ ವಾಹನ ನಿಲ್ಲಿಸಿ ಕುಟುಂಬ ಸಮೇತ, ಸ್ನೇಹಿತರು, ಶಿಕ್ಷಕರು ವಿದ್ಯಾರ್ಥಿಗಳು ನಡೆದುಕೊಂಡು ಗುಹಾಂತರ ದೇವಾಲಯಗಳನ್ನು ವೀಕ್ಷಿಸಿದರು.
ಗದಗ-ಬಾಗಲಕೋಟೆ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪುಲಿಕೇಶಿ ವೃತ್ತದಿಂದ ಎಪಿಎಂಸಿವರೆಗೆ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು. ರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿ ವಾಹನ ಸಂಚಾರವನ್ನು ಸುಗಮಗೊಳಿಸಲು ಹರಸಾಹಸ ಪಟ್ಟರು.
ವಾಹನಗಳನ್ನು ನಿಲ್ಲಿಸಲು ಒಂದೇ ಕಡೆ ಸ್ಥಳವಕಾಶ ಮಾಡಿದರೆ ಚಾಲಕರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ಕಲಬುರ್ಗಿಯ ಬಸ್ ಚಾಲಕ ಬಸನಗೌಡ ಪ್ರತಿಕ್ರಿಯಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಬಾದಾಮಿಯಲ್ಲಿ ಪಾರ್ಕಿಂಗ್ ಪ್ಲಾಜಾ ನಿರ್ಮಿಸಲು 9 ಎಕರೆ ಎಪಿಎಂಸಿ ಜಮೀನು ಖರೀದಿಸಲಾಗಿದೆ. ಬೇಗ ಕಾಮಗಾರಿ ಆರಂಭಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಿ ಪ್ರವಾಸೋದ್ಯಮ ಬೆಳೆಯುವುದು ಎಂದು ಸ್ಥಳೀಯರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.