ADVERTISEMENT

ಬಾಗಲಕೋಟೆ ಬಿಡಿಸಿಸಿ ಚುನಾವಣೆ: ತೆರೆಮರೆಯಲ್ಲಿ ಕಸರತ್ತು ಆರಂಭ

ವಿವಿಧ ಕ್ಷೇತ್ರಗಳಿಂದ 13 ನಿರ್ದೇಶಕರ ಆಯ್ಕೆ

ಬಸವರಾಜ ಹವಾಲ್ದಾರ
Published 18 ನವೆಂಬರ್ 2025, 4:31 IST
Last Updated 18 ನವೆಂಬರ್ 2025, 4:31 IST
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಟ್ಟಡ
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಟ್ಟಡ   

ಬಾಗಲಕೋಟೆ: ಸಹಕಾರದ ಹೆಸರಿನಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಮತ್ತೊಂದು ವೇದಿಕೆ ಸಜ್ಜಾಗಿದೆ. ಹಾಲಿ ಶಾಸಕರು, ಮಾಜಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಸ್ಪರ್ಧಿಸುವುದರಿಂದ ಚುನಾವಣೆಯನ್ನು ರಾಜಕೀಯ ಸಂಪೂರ್ಣವಾಗಿ ಆವರಿಸಿಕೊಂಡಿರುತ್ತದೆ.

ಮುಧೋಳದ ಟಿಎಪಿಎಂಎಸ್‌ ಚುನಾವಣೆಯಾಗದ್ದರಿಂದ ಇಲ್ಲಿನ ಬಿಡಿಸಿಸಿ ನಿರ್ದೇಶಕರ ಚುನಾವಣೆಗೂ ತಡೆ ನೀಡಲಾಗಿತ್ತು. ಈಗ ಮುಧೋಳದ ಟಿಎಪಿಎಂಎಸ್‌ ಚುನಾವಣೆ ನಡೆಯುತ್ತಿರುವುದರಿಂದ ಅದು ಮುಗಿಯುತ್ತಿದ್ದಂತೆಯೇ ಬಿಡಿಸಿಸಿ ಚುನಾವಣೆ ಅಖಾಡ ಸಜ್ಜಾಗಲಿದೆ.

ಬಿಡಿಸಿಸಿಯ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,492 ಮತದಾರರಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿದ್ದ ಹಲವರು ಮತ್ತೇ ಸ್ಪರ್ಧೆಗೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳು ಹಣದ ಥೈಲಿ ಹಿಡಿದುಕೊಂಡು ಓಡಾಟ ಆರಂಭಿಸಿದ್ದಾರೆ.

ADVERTISEMENT

ಕಳೆದ ಅವಧಿಗೆ ಮಾಜಿ ಸಚಿವ ಅಜಯಕುಮಾರ ಸರನಾಯಕ ಅಧ್ಯಕ್ಷರಾಗಿದ್ದರು. ನಿರ್ದೇಶಕ ಮಂಡಳಿಯಲ್ಲಿ ಮಾಜಿ ಸಚಿವ ಎಸ್.ಆರ್‌. ಪಾಟೀಲ, ಶಾಸಕರಾದ ವಿಜಯಾನಂದ ಕಾಶಪ್ಪನವರ, ಸಿದ್ದು ಸವದಿ, ಹಣಮಂತ ನಿರಾಣಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಶಾಸಕರಾಗಿದ್ದ ಎಚ್.ವೈ. ಮೇಟಿ ಅವರಿದ್ದರು.

ಶಾಸಕರಾಗಿದ್ದ ಎಚ್‌.ವೈ. ಮೇಟಿ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಂದ ಆಯ್ಕೆಯಾಗಿದ್ದರು. ಅವರು ನಿಧನರಾಗಿರುವುದರಿಂದ ಆ ಸ್ಥಾನಕ್ಕೆ ಅವರ ಕುಟುಂಬದವರು ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚಿವೆ.

ಅಧ್ಯಕ್ಷರಾಗಿದ್ದ ಅಜಯಕುಮಾರ ಸರನಾಯಕ ಸೇರಿದಂತೆ ಬಹುತೇಕ ರಾಜಕೀಯ ನಾಯಕರು ಸ್ಪರ್ಧಾ ಕಣಕ್ಕೆ ಇಳಿಯುವ ಉತ್ಸಾಹದಲ್ಲಿದ್ದಾರೆ. ಸಹಕಾರ ರಂಗದಲ್ಲಿದ್ದ ಪ್ರಕಾಶ ತಪಶೆಟ್ಟಿ, ಮುರುಗೇಶ ಕಡ್ಲಮಟ್ಟಿ, ಕುಮಾರಗೌಡ ಜನಾಲಿ ಅವರೂ ಸ್ಪರ್ಧಿಸಲಿದ್ದಾರೆ ಎನ್ನುತ್ತವೆ ಅವರ ಆಪ್ತಮೂಲಗಳು.

ಎಂಟು ಜನ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯ್ಕೆಯಾಗುವುದರಿಂದ ಪಿಕೆಪಿಎಸ್‌ನಿಂದ ಚಲಾವಣೆಯಾಗುವ ಮತಗಳ ಮೇಲೆಯೇ ನಿರ್ದೇಶಕರ ಕಣ್ಣು ನೆಟ್ಟಿರುತ್ತದೆ. ಪ್ರತಿ ಸಂಘಕ್ಕೆ ಇಂತಿಷ್ಟು ಎಂದು ಮೊತ್ತ ನೀಡಿದ ಮೇಲೆಯೇ ಮತ ಯಾರಿಗೆ ಎಂಬುದು ನಿರ್ಧಾರವಾಗುತ್ತದೆ. ಆದ್ದರಿಂದ ಪಿಕೆ‍ಪಿಎಸ್ ಅನ್ನು ತಮ್ಮತ್ತ ವಾಲಿಸಿಕೊಳ್ಳುವ ಕಾರ್ಯಕ್ಕೆ ಈಗಾಗಲೇ ಹಲವಾರು ಮುಖಂಡರು ಇಳಿದಿದ್ದಾರೆ.

ರಾಜಕೀಯ ಪಕ್ಷಗಳ ನಾಯಕರು ಕಣದಲ್ಲಿರುವುದರಿಂದ ಚುನಾವಣೆ ರಂಗೇರಲಿದೆ. ಸಹಕಾರ ಕ್ಷೇತ್ರದ ಚುನಾವಣೆ ವಿಧಾನಸಭೆ ಚುನಾವಣೆಯನ್ನೂ ಮೀರಿಸುತ್ತದೆ. ಕೆಲವರು ಈಗಾಗಲೇ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.