
ಬಾಗಲಕೋಟೆ: ಬಾಗಲಕೋಟೆಯಲ್ಲಿ ನಡೆಯಲಿರುವ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಸಂಘ ಪರಿವಾರದ ಕಟ್ಟಾಳುಗಳು ಉದ್ದೇಶ ಪೂರ್ವಕವಾಗಿ ಗಲಭೆ ಎಬ್ಬಿಸಿರುವುದು ಸ್ಪಷ್ಟವಾಗಿರುವುದನ್ನು ಸೌಹಾರ್ದ ಕರ್ನಾಟಕದ ಸತ್ಯ ಶೋಧನಾ ಸಮಿತಿ ಗ್ರಹಿಸಿದೆ.
ಸಮಿತಿ ಮುಖಂಡರು ಶುಕ್ರವಾರ ಪಂಕಾ ಮಸೀದಿ ಮುಂದೆ ನಡೆದ ಕಲ್ಲು ಎಸೆದ ಘಟನೆ ನಡೆದ ಸ್ಥಳ, ಸಾರ್ವಜನಿಕರು, ಸಂತ್ರಸ್ತರನ್ನು ಭೇಟಿ ಮಾಡಿದೆ. ಹಾಗೆಯೇ ಸೂಕ್ತ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ, ಜಿಲ್ಲಾಧಿಕಾರಿ ಭೇಟಿ ಮಾಡಿ ಆಗ್ರಹಿಸಿದೆ
ಸೌಹಾರ್ದತೆ ಸಂಕೇತವಾಗಿದ್ದ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯಲ್ಲಿ ಕೆಲವು ಕೋಮುವಾದಿ ಗೂಂಡಾಗಳು ಅನಾವಶ್ಯಕ ಉದ್ರೇಕಕಾರಿ ನೃತ್ಯ, ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದ್ದಲ್ಲದೇ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಿಂದನೀಯವಾಗಿ ವರ್ತಿಸಿದ್ದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅವಘಡ ತಪ್ಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ಪೊಲೀಸರು ಸಮಜಾಯಿಷಿ ನೀಡಿದರಾದರೂ, ಸ್ಥಳೀಯರನ್ನು ಮಾತನಾಡಿಸಿ ವಿಷಯ ಸಂಗ್ರಹಿಸಿದಾಗ ಇದೊಂದು ಪೂರ್ವ ನಿಯೋಜಿತ ರಾಜಕೀಯ ಸಂಚು ಆಗಿದೆಯೇ ಹೊರತು ಆಕಸ್ಮಿಕವಾಗಿ ಆದದ್ದಲ್ಲ ಎಂಬುದು ಸ್ಥೂಲವಾಗಿ ಗ್ರಹಿಕೆಗೆ ಬಂದಿದೆ ಎಂದು ತಿಳಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ತನ್ನ ಹಿತಾಸಕ್ತಿಗಾಗಿ ಕೋಮು ಪ್ರಚೋದಿತ ಸಂಘರ್ಷಕ್ಕೆ ಚಾಲನೆಗೊಳಿಸುತಿದೆ. ರಾಜಕೀಯ ಪಕ್ಷಗಳ ಹಾರಾಟದಲ್ಲಿ ಸಾಮಾನ್ಯ ಜನತೆಯ ಬದುಕು, ಭಾವನೆಗಳು ಮೂರಾಬಟ್ಟೆಯಾಗುತ್ತಿವೆ. ಅನೇಕ ವರ್ಷಗಳಿಂದ ಕೋಮು ಸೌಹಾರ್ದತೆಯ ಪರಂಪರೆ ಹೊಂದಿರುವ ನಾಡಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಮತೀಯ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದಿದ್ದಾರೆ.
ಕೋಮುಸೂಕ್ಷ್ಮತೆ ಹೊಂದಿದ ಪ್ರದೇಶದಲ್ಲಿ ತಡರಾತ್ರಿವರೆಗೂ ಮೆರವಣಿಗೆ ನಡೆಸಲು ಅನುಮತಿಸಿದ್ದು ಮತ್ತು ಮಸೀದಿ ಮುಂದೆ ಮೆರವಣಿಗೆಯು ಅನಾವಶ್ಯಕವಾಗಿ ಹೆಚ್ಚು ಹೊತ್ತು ನಿಂತುಕೊಂಡು ಪ್ರಚೋದನಕಾರಿ, ಅಶ್ಲೀಲ ಘೋಷಣೆ, ಉದ್ರೇಕಕಾರಿ ಹಾಡು ಇತ್ಯಾದಿಗಳಿಗೆ ಅವಕಾಶ ಕಲ್ಪಿಸಿದ್ದಕ್ಕೆ ಜಿಲ್ಲಾ ಆಡಳಿತ ಹೊಣೆಯಾಗಿದೆ ಎಂದು ದೂರಲಾಗಿದೆ.
ಮಸೀದಿಯೊಳಗಿಂದ ಕಲ್ಲು ಬಂದಿದೆ ಎಂದು ಹೇಳಲಾಗುತ್ತಿದ್ದು, ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಂತೆಯೇ ಕೋಮುವಾದಿಗಳು ಮರುದಿನವೂ ಅಂಗಡಿಗಳನ್ನು ಮುಚ್ಚಿಸಿದ್ದು, ಕಲ್ಲು ತೂರಾಟ ಮಾಡಿದ್ದು ಸಹ ನಡೆದಿದೆ. ತಳ್ಳುಗಾಡಿ ಸುಡಲಾಗಿದೆ. ಕೋಮುವಾದಿ ಸಂಘಟನೆಗಳು ನಡೆಸಿದ ಧರಣಿಯಲ್ಲಿ ತೀವ್ರ ದ್ವೇಷಮಯ ಮಾತು ಆಡಿದ್ದಾರೆ ಎಂದು ತಿಳಿಸಲಾಗಿದೆ.
ಜೇವರ್ಗಿಯ ಸಿದ್ದಲಿಂಗ ಸ್ವಾಮಿಯು ಟ್ರ್ಯಾಕ್ಟರ್ ನಲ್ಲಿ ಕಲ್ಲು ತುಂಬಿಕೊಂಡು ಬರ್ರಿ ಎಂದು ಕರೆ ಕೊಟ್ಟಿದ್ದಾರೆ. ಇನ್ನೂ ಅನೇಕ ವಿಷಯಗಳು ಜನರನ್ನು ವಿಭಜನೆಗೊಳಿಸುವ ಷಡ್ಯಂತ್ರಗಳು ಈ ಪ್ರಕರಣದಲ್ಲಿ ಹುದುಗಿಕೊಂಡಿವೆ. ಉಪಚುನಾವಣೆಯಲ್ಲಿ ಮತ ವಿಭಜನೆಯಾಗಲು ಶಿವಾಜಿ ಜಯಂತಿಯ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಎಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಮೌನವು ಅನಾಹುತಕಾರಿಯಾದದ್ದು. ಕೋಮು ಆಟಕ್ಕೆ ಪೂರಕವಾದದ್ದಾಗಿದೆ. ಪೂರ್ವನಿಯೋಜಿತ ಈ ಕೋಮು ಸಂಘರ್ಷವನ್ನು ತೀವ್ರ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಸರ್ಕಾರ ಇದನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕು ಎಂದು ನಿಯೋಗವು ಆಗ್ರಹಿಸುತ್ತದೆ. ನಿಯೋಗವು ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿಸಲಾಗಿದೆ.
ಜನತೆಯು ಕೋಮುವಾದಿಗಳ ಹುನ್ನಾರಕ್ಕೆ ಬಲಿಯಾಗದಂತೆ ಭ್ರಾತೃತ್ವ ಕಾಪಾಡಿಕೊಳ್ಳಬೇಕಿದೆ ಎಂದು ಸತ್ಯಶೋಧನಾ ಸಮಿತಿಯ ಸದಸ್ಯರು ಆಗ್ರಹಿಸಿದ್ದಾರೆ. ನಿಯೋಗದಲ್ಲಿ ಸೌಹಾರ್ದ ಕರ್ನಾಟಕ ಸಮಿತಿಯ ಕೆ ನೀಲಾ, ಮೀನಾಕ್ಷಿ ಬಾಳಿ,
ಪ್ರೊ. ಕಾಶಿನಾಥ ಅಂಬಲಗೆ, ಮೆಹರಾಜ್ ಪಟೇಲ, ಬಸವರಾಜ ಸೂಳಿಭಾವಿ, ಮುತ್ತು ಬಿಳಿಯೆಲೆ, ಜೆ.ಎಸ್. ಪಾಟೀಲ, ಪ್ರಭುಗೌಡ, ಭೀಮರಾಯ ಪೂಜಾರಿ, ರಾಮಕೃಷ್ಣ ಬೆಂಗಳೂರು, ಮಲ್ಲಿಕಾರ್ಜುನ ಹಡಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.