ಬಾಗಲಕೋಟೆ: ಹಲವು ವರ್ಷಗಳ ಬೇಡಿಕೆ ಆಗಿದ್ದ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಹುದೊಡ್ಡ ಕನಸನ್ನು ಶಾಸಕ ಎಚ್.ವೈ. ಮೇಟಿ ಈಡೇರಿಸಿದ್ದು, ₹450 ಕೋಟಿ ಮಂಜೂರಾತಿಗೆ ಸರ್ಕಾರ ಅನುಮೋದನೆ ನೀಡಿದೆ.
₹450 ಕೋಟಿ ಮಂಜೂರು: ಸಮಗ್ರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಬಲ್ಲ, ವ್ಯಾಪಾರ-ವಹಿವಾಟಿಗೆ ನೆರವಾಗಲಿರುವ, ಸರ್ಕಾರಿ ಶುಲ್ಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿಯಾಗುವ ₹150 ಸೀಟುಗಳ ವೈದ್ಯಕೀಯ ಕಾಲೇಜು ನವನಗರದ ಯುನಿಟ್-1ರ ಸೆಕ್ಟರ್ ನಂ.1 ಮತ್ತು 13ರಲ್ಲಿ ತಲೆ ಎತ್ತಲಿದೆ.
ಮಾದರಿ ಕ್ಷೇತ್ರ: ಬಾಗಲಕೋಟೆ ಕ್ಷೇತ್ರವನ್ನು ಮಾದರಿಯನ್ನಾಗಿಸಲು ಶಾಸಕರು, ಹಲವಾರು ಯೋಜನೆ ಕ್ಷೇತ್ರಕ್ಕೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿಗೆ ಹಣ ಇಲ್ಲ ಎಂಬ ಆರೋಪಗಳ ಮಧ್ಯೆಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹50 ಕೋಟಿ, ಕಳೆದ ವರ್ಷ ಇದೇ ಯೋಜನೆಯಡಿ ₹12.50 ಕೋಟಿ ಅನುದಾನ ತಂದಿದ್ದಾರೆ. ಎಲ್ಲ ಧರ್ಮ-ಜಾತಿಗಳ ಸಮುದಾಯ ಭವನಕ್ಕೆ ಅನುದಾನ ಒದಗಿಸಿದ್ದಾರೆ.
ಹೆದ್ದಾರಿ-ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಬಾಗಲಕೋಟೆ-ನೀರಲಕೇರಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ₹20 ಕೋಟಿ, ಅಚನೂರ ಕ್ರಾಸ್‍ದಿಂದ ಆಲಮಟ್ಟಿವರೆಗೆ ಹೆದ್ದಾರಿ ಅಗಲೀಕರಣ-ದುರಸ್ತಿಗೆ ₹37 ಕೋಟಿ, ಕ್ಷೇತ್ರದ 18 ಗ್ರಾಮಗಗಳಲ್ಲಿ ಬಸ್ ನಿಲ್ದಾಣ ನಿರ್ಮಾಣ, ₹14 ಕೋಟಿ ವೆಚ್ಚದಲ್ಲಿ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಬಾಗಲಕೋಟೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ₹6.25 ಕೋಟಿ ವೆಚ್ಚದ ನಾಲ್ಕು ಮಹಡಿಯ ವಸತಿ ನಿಲಯ, ನವನಗರ, ವಿದ್ಯಾಗಿರಿ ಹಾಗೂ ಬಾಗಲಕೋಟೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ನೆರವಾಗಲು ಬಿಟಿಡಿಎದಿಂದ ₹8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎಐ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಆರು ಪಥದ ರಸ್ತೆ : ಬಾಗಲಕೋಟೆ ಎಪಿಎಂಸಿ ಕ್ರಾಸ್‍ನಿಂದ ಹೊನ್ನಾಕಟ್ಟಿ ಕ್ರಾಸ್ ವರೆಗೆ ರೈಲ್ವೆ ಓವರ್ ಬ್ರಿಜ್ ಸಹಿತ ಆರು ಪಥದ ರಸ್ತೆಯನ್ನಾಗಿ ನಿರ್ಮಿಸಲು ಬಿಟಿಡಿಎದಿಂದ ₹67 ಕೋಟಿ ಅನುದಾನ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ.
ಕಮತಗಿಯ ಹೆದ್ದಾರಿಯಿಂದ ಪಟ್ಟಣದ ಸೇವಾಲಾಲ ಸಂಘದ ವರೆಗೆ ₹10 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ, ಅಮೀನಗಡದ ಪಟ್ಟಣದಲ್ಲಿ ಹಾದಿ ಬಸವೇಶ್ವರ ದೇವಾಲಯದಿಂದ ಚಿತ್ತರಗಿ ಕ್ರಾಸ್‌ವರೆಗೆ ರಸ್ತೆ ಅಗಲೀಕರಣಕ್ಕೆ ₹5 ಕೋಟಿ, ಕಳ್ಳಿಗುಡ್ಡ-ಕ್ರಾಸ್‍ದಿಂದ ಐಹೊಳೆವರೆಗೆ ರಸ್ತೆ ಅಗಲೀಕರಣಕ್ಕೆ ₹3 ಕೋಟಿ ಅನುದಾನ ತಂದಿದ್ದಾರೆ.
ಜನಸಂಪರ್ಕ ಕಚೇರಿಯಲ್ಲಿ ಸೌಲಭ್ಯ ವಿತರಣೆ
ಶಾಸಕ ಎಚ್.ವೈ. ಮೇಟಿ ಜನ್ಮದಿನದ ಪ್ರಯುಕ್ತ ಬುಧವಾರ ₹25 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ಬಡ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಣೆ ನಡೆಯಲಿದೆ. ಶಿರೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ₹3 ಕೋಟಿ ಮೊತ್ತದಲ್ಲಿ ತರಗತಿ ಕೊಠಡಿಗಳು ಹಾಗೂ ಗ್ರಂಥಾಲಯ ನಿರ್ಮಾಣದ ಭೂಮಿಪೂಜೆ ಬಿಟಿಡಿಎದಿಂದ ₹8 ಕೋಟಿ ಮೊತ್ತದಲ್ಲಿ ರಸ್ತೆ ಹಾಗೂ ಇತರ ಕಾಮಗಾರಿಗಳಿಗೆ ಚಾಲನೆ ಜಿ.ಪಂ.ನಿಂದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಚಾಲನೆ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನವನಗರದ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ನಡೆಯಲಿವೆ.
ಬಾಗಲಕೋಟೆ ಕ್ಷೇತ್ರ ಮಾದರಿಯಾಗಿ ಮಾಡಬೇಕು ಅದಕ್ಕಾಗಿ ಬೇಕಾದ ಎಲ್ಲ ಪ್ರಯತ್ನ ಮಾಡುತ್ತಿರುವೆ. ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮೂಲಕ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂಬ ಗುರಿ ಇದೆ.-ಎಚ್.ವೈ. ಮೇಟಿ ಶಾಸಕ ಅಧ್ಯಕ್ಷ ಬಿಟಿಡಿಎ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.