ADVERTISEMENT

ಬಾಗಲಕೋಟೆ | ಬಿತ್ತನೆಗೆ ಸಿದ್ಧತೆ; ನಕಲಿ ಬೀಜ, ರಸಗೊಬ್ಬರಕ್ಕೆ ಬೇಕಿದೆ ಕಡಿವಾಣ

ಉತ್ತಮ ಮಳೆ ಜಿಲ್ಲೆಯಾದ್ಯಂತ ಬಿತ್ತನೆಗೆ ಸಿದ್ಧತೆ

ಬಸವರಾಜ ಹವಾಲ್ದಾರ
Published 2 ಜೂನ್ 2025, 4:46 IST
Last Updated 2 ಜೂನ್ 2025, 4:46 IST
ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನ ಹತ್ತಿರ ಬಿತ್ತನೆಯಲ್ಲಿ ತೊಡಗಿರುವ ರೈತ ಕುಟುಂಬ
ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನ ಹತ್ತಿರ ಬಿತ್ತನೆಯಲ್ಲಿ ತೊಡಗಿರುವ ರೈತ ಕುಟುಂಬ   

ಬಾಗಲಕೋಟೆ: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದೆ. ಮುಂಗಾರು ಮಳೆಯೂ ಉತ್ತಮವಾಗಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರೈತರೂ ಬಿತ್ತನಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಸರಿಯಾಗಿ ಒದಗಿಸುವ ಕೆಲಸ ಆಗಬೇಕಿದೆ.

ಕಳಪೆ ಬಿತ್ತನೆ ಬೀಜ, ನಕಲಿ ರಸಗೊಬ್ಬರದಿಂದ ರೈತರು ಆಗಾಗ ಸಂಕಷ್ಟಕ್ಕೆ ಈಡಾಗುವುದು ನಡದೇ ಇರುತ್ತದೆ. ಕಳೆದ ವರ್ಷ ತೊಗರಿ ಬೆಳೆಯ ಬೀಜಗಳ ಗುಣಮಟ್ಟ ಕಳಪೆಯಾಗಿತ್ತು. ತೊಗರಿ ಬೆಳೆ ಚೆನ್ನಾಗಿ ಹೂವು ಬಿಟ್ಟಿತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಾಯಿ ಬಿಡಲೇ ಇಲ್ಲ. ಇದರಿಂದ ರೈತರು ಪರದಾಡುವಂತಾಯಿತು.

ನಾಲ್ಕು ದಿನಗಳ ಹಿಂದೆ ರಸಗೊಬ್ಬರ ಸಾಗಿಸುತ್ತಿದ್ದ ಲಾರಿಯೊಂದನ್ನು ಸೀಜ್‌ ಮಾಡಲಾಗಿತ್ತು. ಮಹಾರಾಷ್ಟ್ರದಿಂದ ಬಂದಿದ್ದ ಲಾರಿಯಲ್ಲಿ 240 ಚೀಲದಲ್ಲಿ ರಸಗೊಬ್ಬರ ತರಲಾಗಿತ್ತು. ಸಾವಯವ ಹೆಸರಿನಲ್ಲಿ ಮಾರಾಟ ಮಾಡಲು ಬಂದಿದ್ದ ರಸಗೊಬ್ಬರದ ಚೀಲದ ಮೇಲೆ ಯಾವುದೇ ಲೇಬಲ್‌ ಇರಲಿಲ್ಲ. ನಕಲಿ ರಸಗೊಬ್ಬರದ ಶಂಕೆ ವ್ಯಕ್ತವಾಗಿದ್ದು, ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ರೈತ ಸಂಪರ್ಕ ಕೇಂದ್ರ: ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು, ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳನ್ನು ಸಂಗ್ರಹಿಸಿಡಲಾಗಿದೆ.

ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ಈಗಾಗಲೇ ಹಲವು ಕಡೆಗಳಲ್ಲಿ ಬಿತ್ತನೆ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದಾರೆ. 

ಗುರಿ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈಗಾಗಲೇ 1.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿಯಾಗಿದೆ.

ಗೋವಿನಜೋಳ, ತೊಗರಿ, ಹೆಸರು, ಸಜ್ಜೆ ಪ್ರಮುಖ ಬೆಳೆಗಳಾಗಿವೆ. 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ, 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯುವ ಗುರಿ ಹೊಂದಲಾಗಿದೆ.

ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಮೂರು ದಿನಗಳಿಂದ ಮಳೆ ಬಿಡುವು ನೀಡಿರುವುದರಿಂದ ಬಿತ್ತನೆ ಚಟುವಟಿಕೆಗೆ ಚಾಲನೆ ಸಿಕ್ಕಿದೆ. ಮಳೆಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಆಶ್ರಯಿಸಿರುವ ಹುನಗುಂದ, ಇಳಕಲ್‌, ಬಾದಾಮಿ, ಬಾಗಲಕೋಟೆ ರೈತರು ಮಳೆಯಿಂದ ಖುಷಿಯಾಗಿದ್ದಾರೆ.

ರಬಕವಿ ಬನಹಟ್ಟಿ ಬಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆಯರು
ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದಲ್ಲಿ ರೈತ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು
ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕ ಒದಗಿಸಿದರೆ ಸಾಕು. ಶ್ರಮಪಟ್ಟು ಬೆಳೆ ಬೆಳೆಯುತ್ತೇವೆ
ಶಿವಕುಮಾರ ವೈ ರೈತ ಗದ್ದನಕೇರಿ
ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣಾ ಕಾರ್ಯ ಆರಂಭವಾಗಿದೆ. ರೈತರು ಸದುಪಯೋಗ ಪಡೆಯಬೇಕು
ಅಶೋಕ ತಿರಕಪ್ಪನ್ನವರ ಸಹಾಯಕ ಕೃಷಿ ನಿರ್ದೇಶಕ ಕೃಷಿ ಇಲಾಖೆ

ಯೂರಿಯಾಕ್ಕೆ ಪರ್ಯಾಯ ಬಳಕೆಗೆ ಮುಂದಾಗಿ

ಬಾಗಲಕೋಟೆ ಜಿಲ್ಲೆಯಲ್ಲಿ ಡಿಎಪಿ ಎಂಒಪಿ ಯೂರಿಯಾ ಎಸ್‌ಎಸ್‌ಪಿ ಗೊಬ್ಬರ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ ಅಂದಾಜು 1.09 ಲಕ್ಷ ಮೆಟ್ರಿಕ್‌ ಟನ್‌ ಗೊಬ್ಬರದ ನಿರೀಕ್ಷೆ ಇದೆ. 52 ಸಾವಿರ ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನಿದೆ. ಹಂತ ಹಂತವಾಗಿ ರಸಗೊಬ್ಬರ ಬರಲಿದ್ದು ಹಂಚಿಕೆ ಕಾರ್ಯವೂ ನಡೆಯಲಿದೆ.  ಪ್ರತಿ ವರ್ಷ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುತ್ತಾರೆ. ಯೂರಿಯಾಗೆ ಪರ್ಯಾಯವಾಗಿ ಸಾರಜನಕ ರಂಜಕದ ಜೊತೆಗೆ ಪೊಟ್ಯಾಶ್‌ ಒದಗಿಸುವ ಸಮತೋಲನಾತ್ಮಕ ರಸಗೊಬ್ಬರ ಬಳಸಲು ಕೃಷಿ ಇಲಾಖೆ ಸಲಹೆ ನೀಡಿದೆ. ರೈತರು ಸಾರಜನಕ ರಂಜಕ ಒದಗಿಸುವ ಯೂರಿಯಾ ಡಿಎಪಿ ಬಳಕೆ ಮಾಡುತ್ತಿದ್ದಾರೆ. ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೋಟ್ಯಾಶ್ ಒದಗಿಸುವ ಇತರ ಸಂಯುಕ್ತ ಗೊಬ್ಬರಗಳಾದ 15:15:15 10:26:26 12:32:16 14:35:14 17:17:17 14:28:14 191919 9:24:24 8:21:21 ಮತ್ತು 24:24:0:08 ಇತ್ಯಾದಿ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಸಹ ಬಳಸಬಹುದಾಗಿದೆ. ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಸಂಯುಕ್ತ ರಸಗೊಬ್ಬರ ಬಳಸಲು ರೈತರನ್ನು ಕೋರಲಾಗಿದೆ.

ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು

-ಸಂಗಮೇಶ ಹೂಗಾರ

ಹುನಗುಂದ: ಮುಂಗಾರು ಪೂರ್ವದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಹುನಗುಂದ ಮತ್ತು ಇಳಕಲ್ ತಾಲ್ಲೂಕಿನಲ್ಲಿ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಹುನಗುಂದ ತಾಲ್ಲೂಕಿನಲ್ಲಿ 27 ಸಾವಿರ ಹಾಗೂ ಇಳಕಲ್ ತಾಲ್ಲೂಕಿನಲ್ಲಿ 27100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈಗಾಗಲೇ ಎರಡು ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನ ಬೀಜಗಳಾದ ಹೆಸರು ತೊಗರಿ ಸಜ್ಜೆ ಮೆಕ್ಕೆಜೋಳ ಸೂರ್ಯಕಾಂತಿ ದಾಸ್ತಾನು ಮಾಡಿದ್ದು ನಿಗದಿತ ಸಮಯಕ್ಕೆ ರೈತರಿಗೆ ಪೂರೈಸಲು ಕೃಷಿ ಇಲಾಖೆ ಇಲಾಖೆ ಅಣಿಯಾಗಿದೆ. ರೈತರು ಬಿತ್ತನೆ ಬೀಜ ಖರೀದಿಸುವಾಗ ಕೃಷಿ ವಿಶ್ವ ವಿದ್ಯಾಲಯ ಮತ್ತು ಕೃಷಿ ಇಲಾಯಿಂದ ಮಾನ್ಯತೆ ಪಡೆದ ಅಂಗಡಿಗಳಲ್ಲಿ ಮಾತ್ರ ಬೀಜ ಖರೀದಿಸಬೇಕು. ಬೀಜ ಖರೀದಿಸಿದ ಮಾರಾಟಗಾರರ ಸಹಿ ಹೆಸರು ದಿನಾಂಕ ಲಾಟ್ ನಂಬರ್ ವಿವರಗಳೊಂದಿಗೆ ರಸೀದಿ ಬಿತ್ತನೆ ಬೀಜಗಳ ಚೀಲದ ಮೇಲೆ ಮುದ್ರೆ ಹಾಕಿರುವ ಲಾಟ್ ನಂಬರ್ ಯಾವ ದಿನಾಂಕದವರೆಗೆ ಯೋಗ್ಯವಾಗಿದೆ ಎಂಬುದನ್ನು ಪರೀಕ್ಷಿಸಿದ ಮೇಲೆ ಬಳಸಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.