
ಬಾಗಲಕೋಟೆ: ಒಳಚರಂಡಿ ನೀರು ರೈತರ ಜಮೀನಿಗೆ ನುಗ್ಗಿ ಕಬ್ಬು ಬೆಳೆ ಹಾಳಾಗುತ್ತಿದೆ ಎಂದು ಆಕ್ರೋಶಗೊಂಡ ರೈತರು, ಸೋಮವಾರ ಬೆಳಿಗ್ಗೆಯೇ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ದ್ವಾರಕ್ಕೆ ಬೀಗ ಹಾಕಿ, ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ನಡೆಸಿದರು.
ಕಬ್ಬಿನ ಬೆಳೆ ಹಾಳಾಗುತ್ತಿರುವ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ ಎಂದು ದೂರಿದ ಅವರು, ಹೊಲಗಳಿಗೆ ಚರಂಡಿ ನೀರು ನುಗ್ಗದಂತೆ ಮಾಡಬೇಕು ಎಂದು ಆಗ್ರಹಿಸಿದರು. ಅಡುಗೆ ತಯಾರಿಸಿ ಅಲ್ಲಿಯೇ ಊಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆದಿರುವ ಜಮೀನುಗಳಿಗೆ ಒಳಚರಂಡಿ ನೀರು ನುಗ್ಗಿ ಬೆಳೆ ಹಾಳಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದು ಬಿಟಿಡಿಎ ಆವರಣದಲ್ಲಿ ಇರುವ ಸಿಬ್ಬಂದಿ ವಸತಿ ಗೃಹದ ಸುತ್ತಮುತ್ತಲೂ ಒಳಚರಂಡಿ ನೀರು ನುಗ್ಗಿದೆ. ಗಬ್ಬು ವಾಸನೆಯಿಂದಾಗಿ ಮನೆಯಲ್ಲಿರಲೂ ಆಗದಂತೆ ಸ್ಥಿತಿ ಸಿಬ್ಬಂದಿಯದ್ದಾಗಿದೆ.
ಹಲವು ವರ್ಷಗಳಿಂದ ಸಮಸ್ಯೆ ಆಗುತ್ತಿದ್ದರೂ ಬಿಟಿಡಿಎ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಬ್ಬಿನ ಬೆಳೆಯ ಜೊತೆಗೆ ಕೊಳವೆಬಾವಿಗೂ ನೀರು ಸೇರುವುದರಿಂದ ಆ ನೀರು ಕಲುಷಿತವಾಗಿದೆ. ಇದರಿಂದ ಮನೆಯಲ್ಲಿರುವವರ ಆರೋಗ್ಯದ ಮೇಲೂ ಪರಿಣಾಮ ಆಗುತ್ತಿದೆ ಎಂದು ರೈತರು ದೂರಿದರು.
ಪ್ರತಿಭಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದರೂ ಬಿಟಿಡಿಎ ಹಿರಿಯ ಅಧಿಕಾರಿಗಳ್ಯಾರು ಅತ್ತ ಸುಳಿಯಲಿಲ್ಲ. ಸಮಸ್ಯೆ ಪರಿಹರಿಸುವ ಭರವಸೆಯನ್ನೂ ನೀಡಲಿಲ್ಲ. ಗಂಟೆ ಕಳೆದರೂ ಜೆಸಿಬಿ ಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದರು. ಗೇಟ್ ಬಂದ್ ಮಾಡಿದ್ದರಿಂದ ಹಲವಾರು ಸಿಬ್ಬಂದಿ ರಸ್ತೆಯಲ್ಲಿಯೇ ಕಾಯುತ್ತ ಕುಳಿತಿದ್ದರು.
ಬಿಟಿಡಿಎ ಆವರಣದಲ್ಲಿರುವ ವಸತಿ ಗೃಹಗಳ ಮನೆ ಬಾಗಿಲವರೆಗೂ ಒಳಚರಂಡಿ ನೀರು ಆವರಿಸಿಕೊಂಡಿದ್ದು, ಗಬ್ಬು ವಾಸನೆಯಿಂದ ಮನೆಯಲ್ಲಿರಲಾಗದೇ ಪರದಾಡುತ್ತಿದ್ದಾರೆ. ದುರಸ್ತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದರು.
40 ರಿಂದ 50 ಎಕರೆ ಕಬ್ಬು ಕಟಾವು ಮಾಡಬೇಕಿದ್ದು, ನೀರು ನುಗ್ಗಿ ಹಾಳಾಗುತ್ತಿದೆ. ಬೆಳೆಹಾನಿ ಪರಿಹಾರ ಕೊಡಬೇಕು. ಜೊತೆಗೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಮುಪ್ಪಯ್ಯ ಪೂಜಾರಿ, ಶಿವಾನಂದ ಭಂಟನೂರ, ಹನಮಂತ ತೆಗ್ಗಿ, ರಾಮಪ್ಪ ಭಂಟನೂರ, ಧರ್ಮಪ್ಪ ಪೂಜಾರಿ, ಬಸವರಾಜ್ ಬದ್ನೂರ, ಶೇಖಪ್ಪ ಹಲಗುಂದಿ, ಹನಮಂತ ದಾಸರ, ಸಿದ್ದಪ್ಪ ತೆಗ್ಗಿ, ಗಂಗಪ್ಪ ಆಲಗುಂಡಿ, ಮುತ್ತಪ್ಪ ಆಲಗುಂಡಿ, ಹನಮಪ್ಪ ಹಂದ್ರಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.