ADVERTISEMENT

ಬಾಗಲಕೋಟೆ | ಸೌಹಾರ್ದದಿಂದ ಹೋಳಿ ಹಬ್ಬ ಆಚರಿಸಿ: ಸಂಗಪ್ಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:43 IST
Last Updated 1 ಮಾರ್ಚ್ 2026, 6:43 IST
ಬಾಗಲಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ಹೋಳಿ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು
ಬಾಗಲಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ಹೋಳಿ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು   

ಬಾಗಲಕೋಟೆ: ಸಹೋದರತ್ವ ಮತ್ತು ಸೌಹಾರ್ದಕ್ಕೆ ಪ್ರತೀಕವಾದ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಪರಸ್ಪರ ಗೌರವದಿಂದ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹೋಳಿ ಹಬ್ಬದ ಕುರಿತು ಜರುಗಿದ ಶಾಂತಿ ಸಭೆ ಅದ್ಯಕ್ಷತೆವಹಿಸಿ ಮಾತನಾಡಿದ ಅವರು, ಹೋಳಿ ಆಚರಣೆಯಲ್ಲಿ ಕೋಲ್ಕತ್ತಾ ಹೊರತುಪಡಿಸಿದರೆ ದೇಶದಲ್ಲಿಯೇ ಬಾಗಲಕೋಟೆ ಎರಡನೇ ಸ್ಥಾನದಲ್ಲಿದೆ. ಈ ಐತಿಹಾಸಿಲ ಹೋಳಿಯನ್ನು ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೇ ಶಾಂತಿ ಹಾಗೂ ಸಂಭ್ರಮದಿಂದ ಆಚರಿಸಬೇಕು ಎಂದರು.

ಹಬ್ಬದ ಆಚರಣೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಹಬ್ಬದ ಬಂದೋಬಸ್ತ್‌ ಹೊರಗಡೆಯಿಂದ ಬಂದ ಪೊಲೀಸ್ ಸಿಬ್ಬಂದಿ ಜೊತೆಗೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಸಹ ನಿಯೋಜಿಸಲಾಗುತ್ತದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.

ADVERTISEMENT

ಹೋಳಿ ಸಮಿತಿಯ ಪ್ರತಿನಿಧಿ ಮಹಾಬಳೇಶ ಗುಡಗುಂಟಿ ಮಾತನಾಡಿ, ಮಾ.3ರಿಂದ ಹೋಳಿ ಹಬ್ಬ ಪ್ರಾರಂಭಗೊಳ್ಳುತ್ತಿದ್ದು, ಮಾ.4 ರಂದು ಕಾಮದಹನ ಆಗುತ್ತದೆ. ಮಾರ್ಚ 5ರಿಂದ ಮೂರು ದಿನಗಳ ಕಾಲ ಬಣ್ಣದೋಕುಳಿ ಜರುಗಲಿದೆ. 5 ರಂದು ಕಿಲ್ಲಾ, ನವನಗರ ಹಾಗೂ ವಿದ್ಯಾಗಿರಿ, 6 ರಂದು ಹಳಪೇಟೆ, ಜೈನ ಪೇಟೆ ಹಾಗೂ ವೆಂಕಟಪೇಟೆ, 7 ರಂದು ಹೊಸಪೇಟೆ ಓಣಿಯಲ್ಲಿ ಬಣ್ಣದೋಕುಳಿ ನಡೆಯಲಿದೆ ಎಂದರು.

ಇದರ ಜೊತೆಗೆ ಸೋಗಿನ ಬಂಡಿ ಮೆರವಣಿಗೆ ಕೂಡಾ ಜರುಗಲಿದ್ದು, 4ರಂದು ಕಿಲ್ಲಾ, 5ಕ್ಕೆ ಹಳಪೇಟೆ, 6ಕ್ಕೆ ಹೊಸಪೇಟಿ, 7ಕ್ಕೆ ಜೈನ ಪೇಟೆ, 8ಕ್ಕೆ ವೆಂಕಟಪೇಟೆ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಮೆರವಣಿಗೆ ನಡೆಯಲಿದೆ. ಮಾ.6 ರಂದು ಬಸವೇಶ್ವರ ವೃತ್ತದ ಬಳಿ ಇರುವ ಹೊಳೆ ಆಂಜನೇಯ ದೇವಸ್ಥಾನದ ಆವರಣ ಹಾಗೂ 7ರಂದು ಕಿಲ್ಲಾ ಅಂಬಾಭವಾನಿ ದೇವಸ್ಥಾನದ ಬಳಿ ರೇನ್‌ಡ್ಯಾನ್ಸ್ ಆಯೋಜಿಸಲಾಗುವುದು ಎಂದು ತಿಳಿಸಿದರು.

ಎ.ಎ.ದಂಡಿಯಾ, ಸಿಕಂದರ ಅಥಣಿ ಮಾತನಾಡಿ, ರಂಜಾನ್ ತಿಂಗಳು ಆರಂಭಗೊಂಡ ಸಮಯದಲ್ಲಿ ಹೋಳಿ ಹಬ್ಬ ಬಂದಿರುವುದರಿಂದ ಎರಡೂ ಹಬ್ಬಗಳನ್ನು ಸೌಹಾರ್ಧ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಡಿವೈಎಸ್‌ಪಿ ಗಜಾನನ ಸುತಾರ, ತಹಶೀಲ್ದಾರ್ ವಾಸುದೇವ ಸ್ವಾಮಿ, ಹೋಳಿ ಸಮಿತಿ ಪ್ರತಿನಿಧಿಗಳಾದ ಕಳಕಪ್ಪ ಬಾದವಾಡಗಿ, ಅಶೋಕ ಲಿಂಬಾವಳಿ, ಸಂಜೀವ ವಾಡಕರ, ನಾಗರಾಜ ಹದ್ಲಿ, ಪ್ರವೀಣ ಖಾತೇದಾರ, ರಾಜು ನಾಯಕ, ರವಿ ಕುಮಟಗಿ ಉಪಸ್ಥಿತರಿದ್ದರು. 

ರೇನ್‌ಡ್ಯಾನ್ಸ್ ಆಯೋಜನೆ ಪೊಲೀಸ್ ಬಿಗಿ ಬಂದೋಬಸ್ತ್ ವಿವಿಧೆಡೆ ಹೋಳಿ ಆಚರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.