ADVERTISEMENT

ಬಾಗಲಕೋಟೆ | ಕೆಲ ಗ್ರಾಮಗಳಲ್ಲೀಗ ಅಸಮಾಧಾನದ ಹೊಗೆ

20 ಗ್ರಾಮಗಳನ್ನು ಹೊಸ ತಾಲ್ಲೂಕಿಗೆ ಸೇರ್ಪಡೆ ವಿಚಾರ

ಬಸವರಾಜ ಹವಾಲ್ದಾರ
Published 16 ಜೂನ್ 2025, 6:12 IST
Last Updated 16 ಜೂನ್ 2025, 6:12 IST
ಅಮೀನಗಡದಲ್ಲಿ ಇತ್ತೀಚೆಗೆ ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಅಮೀನಗಡವನ್ನು ಹುನಗುಂದ ತಾಲ್ಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು
ಅಮೀನಗಡದಲ್ಲಿ ಇತ್ತೀಚೆಗೆ ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಅಮೀನಗಡವನ್ನು ಹುನಗುಂದ ತಾಲ್ಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು   

ಬಾಗಲಕೋಟೆ: ಹುನಗುಂದ ತಾಲ್ಲೂಕಿಗೆ ಸೇರಿದ, ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಮೀನಗಡ, ಕಮತಗಿ ಸೇರಿದಂತೆ 20 ಹಳ್ಳಿಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕು ಎಂಬ ಮನವಿ ಗ್ರಾಮಗಳಲ್ಲಿ ಸಂಚಲನ ಮೂಡಿಸಿದೆ.

ಶಾಸಕ ಎಚ್‌.ವೈ. ಮೇಟಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದು ಗ್ರಾಮಗಳ ಅಭಿವದ್ಧಿ ದೃಷ್ಟಿಯಿಂದ ತಾಲ್ಲೂಕು ಬದಲಾವಣೆ ಮಾಡಬೇಕು ಎಂದು ಕೋರಿದ್ದರು. ಇದನ್ನು ಪರಿಶೀಲಿಸಿ, ಪ್ರಸ್ತಾವ ಕಳುಹಿಸುವಂತೆ ಸಚಿವ, ಜಿಲ್ಲಾಧಿಕಾರಿಗೆ ಸೂಚಿಸಿದ ಹಿನ್ನಲೆಯಲ್ಲಿ ಗ್ರಾಮಗಳಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.

ಪಟ್ಟಿಯಲ್ಲಿರುವ ಅಮೀನಗಡವನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡ ಸೇರ್ಪಡೆಗೆ ಪಟ್ಟಣದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಹುನಗುಂದ ಕೇವಲ 11 ಕಿ.ಮೀ. ದೂರದಲ್ಲಿದೆ. ಬಾಗಲಕೋಟೆ 42 ಕಿ.ಮೀ. ದೂರವಾಗುತ್ತದೆ. ಗುಳೇದಗುಡ್ಡವೂ 23 ಕಿ.ಮೀ. ದೂರದಲ್ಲಿರುವುದರಿಂದ ಹುನಗುಂದ ತಾಲ್ಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಜನರ ಅಭಿಪ್ರಾಯದ ನಂತರವೂ ಸರ್ಕಾರ ಯಾವುದಾದರೂ ಒಂದು ತಾಲ್ಲೂಕು ಸೇರ್ಪಡೆಗೆ ಸರ್ಕಾರ ಮುಂದಾದರೆ, ಪ್ರತ್ಯೇಕ ತಾಲ್ಲೂಕು ರಚನೆ ಮಾಡಬೇಕು ಎಂದು ಹೋರಾಟ  ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 

ಕಮತಗಿಯಲ್ಲಿ ನಡೆದ ಸಭೆಯಲ್ಲಿ ಬಾಗಲಕೋಟೆ ತಾಲ್ಲೂಕಿಗೆ ಸೇರ್ಪಡೆ ಮಾಡಲು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ. ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಐಹೊಳೆಯ ಜನರು ಹುನಗುಂದ ತಾಲ್ಲೂಕಿನಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ. ಕಳ್ಳಿಗುಡ್ಡ ಗ್ರಾಮದಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನುಳಿದ ಗ್ರಾಮಗಳಲ್ಲಿಯೂ ಸಭೆ ನಡೆಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡುವ ಕೆಲಸ ನಡೆಯುತ್ತದೆ. ಜನರ ಅಭಿ‌ಪ್ರಾಯವನ್ನು ಸಮೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುತ್ತದೆ.

ಗ್ರಾಮಸ್ಥರ ಅಸಮಾಧಾನ: ಗ್ರಾಮದ ಜನರೊಂದಿಗೆ ಚರ್ಚಿಸಿದೆ ಶಾಸಕರು ಏಕಾಏಕಿ ಸರ್ಕಾರಕ್ಕೆ ಪತ್ರ ಬರೆದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಹುನಗುಂದ ಸಮೀಪವಿದ್ದರೂ, ಗ್ರಾಮವನ್ನು ಬೇರೆ ತಾಲ್ಲೂಕಿಗೆ ಸೇರ್ಪಡೆಗೆ ಮುಂದಾಗಿದ್ದು ಏಕೆ ಎಂಬುದು ಅವರ ಪ್ರಶ್ನೆ. ಪತ್ರ ಬರೆಯುವ ಮೊದಲು ಚರ್ಚೆ ನಡೆಸಬೇಕಿತ್ತು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಬಾದಾಮಿ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡಕ್ಕೆ ಸೇರ್ಪಡೆಗೊಳಿಸುವ ಕುರಿತು ಶಾಸಕ ಎಚ್.ವೈ. ಮೇಟಿ ಪತ್ರ ಬರೆದಿರುವುದು

ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸೇರ್ಪಡೆ ಹಿಂದೆ ರಾಜಕೀಯ ಉದ್ದೇಶ ಪತ್ರ ಬರೆದಿರುವುದಕ್ಕೆ ಅಸಮಾಧಾನ

ತಹಶೀಲ್ದಾರ್ ಆದೇಶದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜನರ ಅಭಿಪ್ರಾಯವನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು
ಡಿ.ಎಸ್.ಯತ್ನಟ್ಟಿ ಕಂದಾಯ ನಿರೀಕ್ಷಕ
ಬಾಗಲಕೋಟೆ ಹಾಗೂ ಗುಳೇದಗುಡ್ಡಕ್ಕೆ ಹೋಲಿಸಿದರೆ ಹುನಗುಂದ ಸಮೀಪವಾಗುತ್ತದೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಹುನಗುಂದ ತಾಲ್ಲೂಕಿನಲ್ಲಿಯೇ ಮುಂದುವರೆಯಲಿ. ಸೇರ್ಪಡೆಗೆ ಮುಂದಾದರೆ ಪ್ರತ್ಯೇಕ ತಾಲ್ಲೂಕು ಮಾಡಲು ಹೋರಾಟ ಮಾಡಲಾಗುವುದು. - ಜಗದೀಶ ಬಿಸಲದಿನ್ನಿ
ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಮೀನಗಡ

ಗ್ರಾಮಗಳ ವಿಧಾನಸಭಾ ಕ್ಷೇತ್ರ ಯಾವುದು? ಬಾಗಲಕೋಟೆ: ಶಾಸಕ ಎಚ್.ವೈ. ಮೇಟಿ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಬರೆದಿರುವ ಪತ್ರದಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದ ಈ ಗ್ರಾಮಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕು ಎಂದು ತಿಳಿಸಿದ್ದಾರೆ. ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗೂ ಆ ಪತ್ರವನ್ನು ಹಾಗೆಯೇ ಕಳುಹಿಸಲಾಗಿದೆ. ಇಲ್ಲಿಯೂ ಪತ್ರ ವ್ಯವಹಾರದಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರವೇ ಎಂದು ಉಲ್ಲೇಖಿಸಲಾಗುತ್ತಿದೆ. ಬಾದಾಮಿ ಎಂದು ನಮೂದಿಸಿರುವುದು ಪತ್ರ ಸಿದ್ಧಪಡಿಸಿದವರಿಗೆ ಗೊತ್ತಾಗಲಿಲ್ಲವೇ? ಸಹಿ ಮಾಡುವಾಗ ಶಾಸಕರೂ ನೋಡಲಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

ರಾಜಕೀಯ ಲಾಭಕ್ಕಾಗಿ ಯತ್ನವೇ? ಬಾಗಲಕೋಟೆ: 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ವೇಳೆಗೆ ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಾಗಲಿದ್ದು ಈ ಗ್ರಾಮಗಳ ಸೇರ್ಪಡೆ ಮೂಲಕ ಹೊಸ ಕ್ಷೇತ್ರ ಹುಡುಕಿಕೊಳ್ಳುವ ಯತ್ನವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2008ಕ್ಕೂ ಮೊದಲು ಗುಳೇದಗುಡ್ಡ ಕ್ಷೇತ್ರ ಅಸ್ತಿತ್ವದಲ್ಲಿತ್ತು. ಆಗ ಅಮೀನಗಡ ಸೇರಿದಂತೆ ಸೇರ್ಪಡೆಗೆ ಸೂಚಿಸಿದ ಗ್ರಾಮಗಳು ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಈಗ ಪುನರ್‌ವಿಂಗಡಣೆಯಾದರೆ ಗುಳೇದಗುಡ್ಡ ಅಥವಾ ಬಾಗಲಕೋಟೆ ಗ್ರಾಮೀಣ ಕ್ಷೇತ್ರ ಅಸ್ತಿತ್ವಕ್ಕೆ ಬರಬಹುದು ಎನ್ನುವ ಲೆಕ್ಕಾಚಾರ ನಡೆದಿದೆ. ಈ ಹಿಂದೆ ಗುಳೇದಗುಡ್ಡ ಕ್ಷೇತ್ರದಿಂದಲೇ ಎಚ್‌.ವೈ. ಮೇಟಿ ಶಾಸಕರಾಗಿದ್ದರು. ಕ್ಷೇತ್ರ ವಿಂಗಡಣೆಯ ನಂತರ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದರು. ಹಳೆಯ ಕ್ಷೇತ್ರಕ್ಕೆ ಹೋಗಲು ಅವುಗಳನ್ನು ಒಂದೇ ತಾಲ್ಲೂಕಿನಲ್ಲಿ ತರುವ ಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.  ಸೇರ್ಪಡೆಗೆ ಸೂಚಿಸಿದ ಗ್ರಾಮಗಳ ಪಟ್ಟಿ: ಹುನಗುಂದ ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡ ತಾಲ್ಲೂಕಿಗೆ ಸೇರ್ಪಡೆಗೊಳಿಸಬೇಕು ಎಂಬ ‍ಪತ್ರ ಬರೆಯಲಾಗಿದೆ ಅಮೀನಗಡ ಕಮತಗಿ ಐಹೊಳೆ ಕಳ್ಳಿಗುಡ್ಡ ನಿಂಬಲಗುಂದಿ ಹಿರೇಮಾಗಿ ಮಾದಾಪುರ ಇನಾಮ ಬೂದಿಹಾಳ ಬೇವಿನಾಳ ಹೂವಿನಹಳ್ಳಿ ರಾಮಥಾಳ ಮುಳ್ಳೂರು ಕಡಿವಾಲ-ಕಲ್ಲಾಪೂರ ಯರನಾಯಕನಾಳ ಸುರುಳಿಕಲ್ಲ ಬಸವನಾಳ ಮರಡಿ ಬೂದಿಹಾಳ ಮೂಗನೂರ ಅಂಬಲಿಕೊಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.