ರಾಂಪುರ: ಶತಮಾನ ಪೂರೈಸಿರುವ ಬಾಗಲಕೋಟೆ ತಾಲ್ಲೂಕಿನ ಕಿರಸೂರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲಾ ಕಟ್ಟಡ ಅತ್ಯಂತ ಇಕ್ಕಟ್ಟಿನ ಜಾಗೆಯಲ್ಲಿದ್ದು, ಅದರಲ್ಲಿನ ನಾಲ್ಕು ಕೊಠಡಿಗಳು ಈಗ ಶಿಥಿಲಗೊಂಡು ಮಳೆ ಬಂದರೆ ಸೋರುತ್ತಿವೆ.
ಕೊಠಡಿಗಳ ಮೇಲ್ಛಾವಣಿ ಕುಸಿಯುತ್ತಿದ್ದು, ಮಳೆ ಬಂದಾಗಲೊಮ್ಮೆ ನೀರು ಗೋಡೆಗಳ ಮೂಲಕ ಒಳಗೆ ಇಳಿಯುತ್ತದೆ. ಹೀಗಾಗಿ ಗೋಡೆಗಳೆಲ್ಲ ಶಿಥಿಲಗೊಂಡಿದ್ದು(ನೆನೆದಿದ್ದು)ಈಗಲೋ ಆಗಲೋ ಕಳಚಿ ಬೀಳುವಂತಿದೆ. ಮೇಲ್ಛಾವಣಿಯ ಸಿಮೆಂಟ ಉದುರಿ ಬೀಳುತ್ತಿದ್ದು, ಎರಡು ಕೊಠಡಿಗಳ ಛಾವಣಿ ಕೆಳಕ್ಕೆ ಕುಸಿಯುತ್ತಿವೆ. ಇದು ಗ್ರಾಮಸ್ಥರು, ಶಿಕ್ಷಕರು ಹಾಗೂ ಮಕ್ಕಳಲ್ಲಿ ಭಯ ಹುಟ್ಟಿಸಿದೆ.
ಈ ಶಾಲಾ ಕಟ್ಟಡವೇ ಕಿರಿದಾದ ಜಾಗೆಯಲ್ಲಿದ್ದು, ಸುತ್ತಮುತ್ತಲಿನ ಮನೆಗಳ ಸಂದಿಯಲ್ಲಿ ಸಿಕ್ಕಿಕೊಂಡಿದೆ. ಇಲ್ಲಿರುವ ಕೊಠಡಿಗಳು ಸಹ ಚಿಕ್ಕದಾಗಿದ್ದು, ಬೆಳಕಿನ ಕೊರತೆಯಿದೆ. ಜೊತೆಗೆ ಬೇಸಿಗೆಯ ದಿನಗಳಲ್ಲಂತೂ ಹವೆಯ ಕೊರತೆಯಿಂದ ಮಕ್ಕಳು ಬೆವೆತು ಹೋಗುವ ಸ್ಥಿತಿಯಿದೆ.
ಇಕ್ಕಟ್ಟಿನ ಸ್ಥಳದಲ್ಲಿರುವ ಈ ಶಾಲೆಯಲ್ಲಿ ಬೇರೆ ಕಟ್ಟಡ ಮಾಡಿಕೊಳ್ಳಲೂ ಸಹ ಜಾಗೆಯಿಲ್ಲ. ಹೀಗಾಗಿ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಲು ಈಗಿರುವ ಕೊಠಡಿಗಳ ದುರಸ್ಥಿ ಆಗಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.
’ಶಾಸಕ ಎಚ್.ವೈ.ಮೇಟಿ ಅವರಿಗೆ ಶಾಲೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡಿ ಆದಷ್ಟು ಬೇಗ ಕೊಠಡಿಗಳನ್ನು ದುರಸ್ಥಿ ಮಾಡಿಸಿಕೊಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಶಿಥಿಲಾವಸ್ಥೆಯ ಕೊಠಡಿಗಳನ್ನು ದುರಸ್ಥಿ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದಷ್ಟು ಬೇಗನೇ ಕೆಲಸವಾದರೆ ಒಳ್ಳೆಯದಾಗುತ್ತದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲು ಕಂಬಾರ ಹೇಳುತ್ತಾರೆ.
ಆಟಕ್ಕೆ ಮೈದಾನವೇ ಇಲ್ಲ: 1 ರಿಂದ 7 ನೇ ತರಗತಿಯವರೆಗೆ 280 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ಇವರಿಗೆ ಪಾಠ, ಊಟ ಸೇರಿ ಎಲ್ಲ ಸೌಲಭ್ಯಗಳು ಸಿಗುತ್ತಿದ್ದರೂ 'ಆಟದ ಭಾಗ್ಯ' ಮಾತ್ರ ಇವರಿಗಿಲ್ಲ. ಹೀಗಾಗಿ ಈ ಶಾಲೆಯ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ.
ಈ ಹಿಂದೆ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದು ಅವರು ಮಕ್ಕಳನ್ನು ಆಟಕ್ಕೆ ಗ್ರಾಮದ ಹೊರವಲಯದ ಗೌರಿಶಂಕರ ಮಠದ ಬಳಿಯ ಖುಲ್ಲಾ ಜಾಗೆಗೆ ಕರೆದೊಯ್ಯುತ್ತಿದ್ದರಂತೆ. ಈಗ ದೈಹಿಕ ಶಿಕ್ಷಣ ಶಿಕ್ಷಕರೂ ಇಲ್ಲ. ಆ ಖುಲ್ಲಾ ಜಾಗೆಯೂ ಇಲ್ಲದಂತಾಗಿ ಆಟದ ಪಾಠವೇ ಸಿಗದಂತಾಗಿದೆ.
ಶಾಲೆ ಸ್ಥಳಾಂತರ ಆಗಬೇಕು: ಈಗಿರುವ ಶಾಲಾ ಕಟ್ಟಡ ಅತೀ ಚಿಕ್ಕ ಹಾಗೂ ಇಕ್ಕಟ್ಟಿನ ಜಾಗೆಯಲ್ಲಿದ್ದು, ಮುಂಬರುವ ದಿನಗಳಲ್ಲಾದರೂ ವಿಶಾಲವಾದ ಜಾಗೆಯಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಬೇಕಾದ ಅವಶ್ಯಕತೆಯಿದೆ ಎಂದು ಊರಿನ ಹಿರಿಯರು ಹೇಳುತ್ತಾರೆ.
ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಗೊಂಡಿರುವ ಶಾಲಾ ಕೊಠಡಿಗಳ ಪಟ್ಟಿ ಮಾಡಿದ್ದು ಶಾಸಕರ ಅನುದಾನ ಹಾಗೂ ತಾಲ್ಲೂಕು ಪಂಚಾಯತಿ ಅನುದಾನದ ಲಭ್ಯತೆಯ ಆಧಾರದ ಮೇಲೆ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ. ತುರ್ತು ಇರುವುದಕ್ಕೆ ಮೊದಲಾದ್ಯತೆ ನೀಡಲಾಗುತ್ತಿದೆ.– ಎಂ.ಎಸ್.ಬಡದಾನಿ, ಬಿಇಒ ಬಾಗಲಕೋಟೆ
ಕಿರಸೂರ ಶಾಲೆಯಲ್ಲಿ ಶೌಚಾಲಯದ ಕೊರತೆಯಿರುವುದು ಗಮನಕ್ಕೆ ಬಂದಿದೆ. ಕ್ರಿಯಾ ಯೋಜನೆಯಲ್ಲಿ ಈ ಕೆಲಸ ಸೇರಿದೆ. ಆದಷ್ಟು ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿ ಕೊಡಲಾಗುವುದು.– ಶಶಿಕಲಾ ಕೊಡತೆ, ಪಿಡಿಓ ಗ್ರಾಮ ಪಂಚಾಯತಿ ಭಗವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.