ADVERTISEMENT

ಹುಟ್ಟೂರಿನ ಶಾಲೆಗೆ ಶಾಸಕ ಮೇಟಿ 2 ಎಕರೆ ಭೂದಾನದ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:55 IST
Last Updated 10 ಅಕ್ಟೋಬರ್ 2025, 4:55 IST
ತಿಮ್ಮಾಪುರ ಗ್ರಾಮದ ನೂತನ ಸರ್ಕಾರಿ ಪ್ರೌಢಶಾಲೆಗೆ 2 ಎಕರೆ ಜಮೀನು ದಾನ ನೀಡಲು ವಾಗ್ದಾನ ಮಾಡಿದ ಶಾಸಕ ಎಚ್.ವೈ. ಮೇಟಿ ಅವರನ್ನು ಸನ್ಮಾನಿಸಲಾಯಿತು
ತಿಮ್ಮಾಪುರ ಗ್ರಾಮದ ನೂತನ ಸರ್ಕಾರಿ ಪ್ರೌಢಶಾಲೆಗೆ 2 ಎಕರೆ ಜಮೀನು ದಾನ ನೀಡಲು ವಾಗ್ದಾನ ಮಾಡಿದ ಶಾಸಕ ಎಚ್.ವೈ. ಮೇಟಿ ಅವರನ್ನು ಸನ್ಮಾನಿಸಲಾಯಿತು   

ರಾಂಪುರ: ಸ್ವಗ್ರಾಮ ತಿಮ್ಮಾಪೂರದಲ್ಲಿ ಪ್ರಾರಂಭಿಸಲಾಗಿರುವ ಸರ್ಕಾರಿ ಪ್ರೌಢಶಾಲೆಗೆ ತಮ್ಮ ತಾಯಿಯ ಹೆಸರಿನಲ್ಲಿ 2 ಎಕರೆ ಜಮೀನು ದಾನ ನೀಡುವುದಾಗಿ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಹೇಳಿದರು.

ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಗುರುವಾರ ಜರುಗಿದ ನೂತನ ಪ್ರೌಢಶಾಲೆಯ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು 8 ನೇ ತರಗತಿ ಮಾತ್ರ ಓದಿದೆ. ಪದವಿ ಕಲಿಯಲು ಸಾಧ್ಯವಾಗಲಿಲ್ಲ. ಆ ಕೊರಗು ನನ್ನನ್ನು ಕಾಡುತ್ತಿದೆ. ಆ ಹಿನ್ನೆಲೆಯಲ್ಲಿ ನನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಪ್ರೌಢಶಾಲೆ ಮಂಜೂರಿ ಮಾಡಿಸಿಕೊಂಡಿದ್ದೇನೆ ಎಂದರು.

ಪ್ರೌಢಶಾಲೆಯ ಕಟ್ಟಡ, ಮೈದಾನ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಲು ನನ್ನ ತಾಯಿ ಹೊಳೆಯವ್ವ ಮೇಟಿ ಹೆಸರಿನಲ್ಲಿ 2 ಎಕರೆ ಭೂದಾನ ಮಾಡುವುದಾಗಿ ಹೇಳಿದ ಶಾಸಕ ಮೇಟಿ, ಸಿಎಸ್ ಆರ್ (3 ವರ್ಷ ಶಾಸಕರ ಸ್ವಂತ ಹಣದಲ್ಲಿ ನಿರ್ವಹಣೆ) ಯೋಜನೆಯಡಿ ಮಂಜೂರಾಗಿರುವ ಪ್ರೌಢಶಾಲೆಯ ನಿರ್ವಹಣೆ, ಶಿಕ್ಷಕರ ವೇತನ ಸೇರಿ ಎಲ್ಲ ಖರ್ಚು 3 ವರ್ಷ ನಾನೇ ನಿರ್ವಹಿಸಿ ನಂತರ ಇಲಾಖೆಗೆ ಹಸ್ತಾಂತರಿಸುವುದಾಗಿ ಹೇಳಿದರು.

ADVERTISEMENT

ಯುವ ಸಮೂಹ ಕೇವಲ ನೌಕರಿಗಾಗಿ ಶಿಕ್ಷಣ ಕಲಿಯಬಾರದು. ಬದುಕಿಗಾಗಿ ಶಿಕ್ಷಣ ಕಲಿಯಬೇಕು. ತಿಮ್ಮಾಪೂರ ಗ್ರಾಮದ ಪ್ರತಿ ಕುಟುಂಬದ ಮಕ್ಕಳು ಶಿಕ್ಷಣವಂತರಾಗಬೇಕು. ಮಾದರಿ ಗ್ರಾಮವಾಗಿ ಗುರುತಿಸಿಕೊಳ್ಳಬೇಕು ಎಂಬುದು ನನ್ನಾಸೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಎಲ್ಲ ಅಗತ್ಯ ಸಹಾಯ, ಸಹಕಾರ ನೀಡುತ್ತೇನೆ ಎಂದು  ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಕೊಳ್ಳಾರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜೀತ ಮನ್ನಿಕೇರಿ, ಬಿಇಓ ಎಂ.ಎಸ್‌.ಬಡದಾನಿ, ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಾಯಕ್ಕ ಮೇಟಿ ಹಾಗೂ ಬಸವಂತಪ್ಪ ಮೇಟಿ, ಪಿಕೆಪಿಎಸ್‌ಅಧ್ಯಕ್ಷ ಮುತ್ತಪ್ಪ ಹುಗ್ಗಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಲ್ಲವ್ವ ಮಸಬಿನಾಳ, ಪಿಡಿಓ ಅರ್ಚನಾ ಕುಲಕರ್ಣಿ, ಪ್ರಮುಖರಾದ , ಜಿ.ಜಿ.ಮಾಗನೂರ, ಉಮೇಶ ಮೇಟಿ, ಎಚ್‌.ಕೆ.ಗುಡೂರ, ವೈ.ವೈ.ತಿಮ್ಮಾಪುರ, ಧರ್ಮೇಶ ತುಂಬುರಮಟ್ಟಿ, ನಾಗರಾಜ ದೇಶಪಾಂಡೆ, ಹಸನಡೋಂಗ್ರಿ ಮೆಟಗುಡ್ಡ, ಎಚ್‌.ಎಂ.ಪಾಟೀಲ, ಪ್ರಕಾಶ ಕೋಟಿ, ಪಿ.ಎಸ್‌. ಚವ್ಹಾಣ, ಎಸ್‌.ಎಸ್‌.ಬೆಣ್ಣೂರ, ಪ್ರಶಾಂತ ಸವದಿ, ವಿಠ್ಠಲ ವಾಲಿಕಾರ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.