ADVERTISEMENT

ಬಾಗಲಕೋಟೆಯಲ್ಲಿ ಕಲ್ಲು ತೂರಾಟ: 8 ಮಂದಿ ಬಂಧನ, 24ರವರೆಗೆ ನಿಷೇಧಾಜ್ಞೆ ಜಾರಿ

ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್; 24ರವರೆಗೆ ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 22:30 IST
Last Updated 20 ಫೆಬ್ರುವರಿ 2026, 22:30 IST
ಬಾಗಲಕೋಟೆ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ಕಲ್ಲು ತೂರಾಟ ನಡೆದಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದರು
ಬಾಗಲಕೋಟೆ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ಕಲ್ಲು ತೂರಾಟ ನಡೆದಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದರು   

ಬಾಗಲಕೋಟೆ: ನಗರದಲ್ಲಿ ಗುರುವಾರ ರಾತ್ರಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇದೇ 24ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ, ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

‘ಕಲ್ಲು ತೂರಿದ ಆರೋಪದ ಮೇಲೆ ನವನಗರದ 10ನೇ ಸೆಕ್ಟರ್ ನಿವಾಸಿ ತಂಜೀರ್ (26) ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ನನಗೂ ಸೇರಿ ಪೊಲೀಸ್ ಸಿಬ್ಬಂದಿ ಮತ್ತು ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ. ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಸಂಜೆ 5 ಗಂಟೆಗೆ ಆರಂಭವಾದ ಮೆರವಣಿಗೆಯು ರಾತ್ರಿ 10 ಗಂಟೆ ಸುಮಾರಿಗೆ ಮಸೀದಿ ಸಮೀಪಿಸುತ್ತಿದ್ದಂತೆಯೇ, ಅಲ್ಲಿದ್ದ ತಂಜೀರ್ ಎಂಬವರು ಎರಡು ಸಣ್ಣ ಕಲ್ಲುಗಳನ್ನು ತೆಗೆದುಕೊಂಡು ಎಸೆದಿದ್ದಾರೆ. ಅದು ಪೊಲೀಸ್ ಸಿಬ್ಬಂದಿ ಮತ್ತು ವ್ಯಕ್ತಿಯೊಬ್ಬರ ಮೇಲೆ ಬಿತ್ತು. ಯಾರಿಗೂ ಗಂಭೀರ ಸ್ವರೂಪದ ಗಾಯಗಳು ಆಗಲಿಲ್ಲ. ಈ ಕಲ್ಲುಗಳು ತೂರಿದ್ದು ಹೊರತುಪಡಿಸಿದರೆ, ಬೇರೆ ಯಾವುದೇ ತೂರಾಟ ಆಗಿಲ್ಲ ಎಂದು ಲಭ್ಯವಾದ ವಿಡಿಯೊ ದೃಶ್ಯಾವಳಿಗಳಿಂದ ಗೊತ್ತಾಗಿದೆ’ ಎಂದು ಅವರು ವಿವರಿಸಿದರು.

ADVERTISEMENT

‘ಪರಿಸ್ಥಿತಿ ಉದ್ವಿಗ್ನಗೊಂಡ ತಕ್ಷಣವೇ ಕ್ರಮ ಕೈಗೊಂಡೆವು. ಹಿಂದೂ ಮತ್ತು ಮುಸ್ಲಿಂ ಮುಖಂಡರನ್ನು ವಿಶ್ವಾಸಕ್ಕೆ ಪಡೆದು, ಪರಿಸ್ಥಿತಿ ನಿಭಾಯಿಸಿದೆವು. ನಂತರ ಮೆರವಣಿಗೆಯು ಮಸೀದಿ ಎದುರಿನಿಂದ ಶಾಂತಿಯುತವಾಗಿ ಸಾಗಿತು. ಮಸೀದಿಯಲ್ಲಿ ಪ್ರಾರ್ಥನೆಯು ನಿರಾತಂಕವಾಗಿ ನೆರವೇರಿತು’ ಎಂದು ಅವರು ಮಾಹಿತಿ ನೀಡಿದರು.

ಮತ್ತೊಮ್ಮೆ ಕಲ್ಲು ತೂರಾಟ: ನಗರದ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ‌ ಕಲ್ಲು ತೂರಾಟ ನಡೆದಿದ್ದು, ಯುವಕರ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. 

ನಗರದ ಬಹುತೇಕ ಅಂಗಡಿಗಳು ಮುಚ್ಚಿದ್ದವು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾತಾವರಣ ಬಿಗುವಿನಿಂದ ಕೂಡಿದೆ. ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನ್ ಸಿಂಗ್ ರಾಥೋಡ್ ಘಟನಾ ಸ್ಥಳಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

ಬಾಗಲಕೋಟೆ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ಕಲ್ಲು ತೂರಾಟ ನಡೆದ ಬಳಿಕ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದರು
ಕಲ್ಲು ತೂರಾಟದ ಘಟನೆಗೆ ರಾಜಕೀಯ ಬಣ್ಣ ಬಳಿಯುವುದು ಬೇಡ. ಯಾವುದೇ ಧರ್ಮದ ಆಚರಣೆ ಸಂದರ್ಭದಲ್ಲಿ ಆತಂಕ ಸೃಷ್ಠಿಸಬಾರದು. ಈ ಘಟನೆಯಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
ಆರ್.ಬಿ.ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವ
ಬಾಗಲಕೋಟೆಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಶಾಂತಿ ಕಾಪಾಡಬೇಕು
ಸಿದ್ದಾರ್ಥ ಗೋಯಲ್‌ ಎಸ್‌ಪಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.