ADVERTISEMENT

ಬಾಗಲಕೋಟೆ | 9 ಸೆಂ.ಮೀ ಮಳೆ ದಾಖಲು: 15 ಮನೆಗಳ ಕುಸಿತ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 10:24 IST
Last Updated 26 ಸೆಪ್ಟೆಂಬರ್ 2020, 10:24 IST
   

ಬಾಗಲಕೋಟೆ: ಕಳೆದ 12 ತಾಸುಗಳಿಂದ ಜಿಲ್ಲೆಯಾದ್ಯಂತ ಮಾಯದಂತಹ ಮಳೆ ಸುರಿಯುತ್ತಿದೆ. ಶುಕ್ರವಾರ ಸಂಜೆ ಕತ್ತಲಾಗುತ್ತಿದ್ದಂತೆಯೇ ತನ್ನ ಆರ್ಭಟ ಶುರು ಮಾಡಿದ ಮಳೆರಾಯ ಶನಿವಾರ ನಸುಕು ಹರಿದರೂ ದಣಿದಿರಲಿಲ್ಲ. ಬೆಳಿಗ್ಗೆ 10ರ ವೇಳೆಗೆ ಬಿಡುವು ನೀಡಿದ. ತಡರಾತ್ರಿ ಆಗಾಗ ಸಿಡಿಲಿನ ಅಬ್ಬರ ನಿದ್ರೆಗೆ ಜಾರಿದವರನ್ನು ಬಡಿದೆಬ್ಬಿಸಿತು. ಭಯ, ಆತಂಕಕ್ಕೂ ಕಾರಣವಾಯಿತು.

ಬಾಗಲಕೋಟೆ ನಗರದಲ್ಲಿ 9 ಸೆ.ಮೀ ಈ ವರ್ಷದ ದಾಖಲೆ ಮಳೆ ಸುರಿದಿದೆ. ಉಳಿದಂತೆ ಎಲ್ಲ ತಾಲ್ಲೂಕುಗಳಲ್ಲೂ ಉತ್ತಮ ಮಳೆ ಸುರಿದಿದೆ. ನಿರಂತರ ಮಳೆಯಿಂದ ಮಣ್ಣಿನ ಮಾಳಿಗೆ ಮನೆಗಳು ನೆನೆದು ಕುಸಿದು ಬೀಳುತ್ತಿದ್ದು, ಗ್ರಾಮೀಣರನ್ನು ಆತಂಕಕ್ಕೀಡು ಮಾಡುತ್ತಿವೆ. ಕಳೆದ 14 ಗಂಟೆಗಳಲ್ಲಿ ಬಾಗಲಕೋಟೆ ಉಪವಿಭಾಗದಲ್ಲಿ 15ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.

ರಾಸುಗಳ ರಕ್ಷಣೆ:ಹುನಗುಂದ ತಾಲ್ಲೂಕಿನ ಅಮರಾವತಿ ಬಳಿ ಚಿತ್ರದುರ್ಗ-ಸೊಲ್ಲಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೇತುವೆ ಕೆಳಗೆ ಮಳೆ ನೀರು ಹೆಚ್ಚಾಗಿ ರಾಸುಗಳ ಸಾಗಿಸುತ್ತಿದ್ದ ಮ್ಯಾಕ್ಸಿ ಕ್ಯಾಬ್ ವಾಹನ ಸಿಲುಕಿತ್ತು.

ADVERTISEMENT

ಹಗ್ಗದ ಸಹಾಯದಿಂದ ಸೇತುವೆ ಕೆಳಗೆ ನೀರಲ್ಲಿ ಸಿಲುಕಿದ ವಾಹನವನ್ನು ಹೊರ ತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ ರಾಸುಗಳ ರಕ್ಷಣೆ ಮಾಡಿದರು.

ಹುನಗುಂದ ಪಟ್ಟಣ ಸಂಪರ್ಕಿಸುವ ಅಮರಾವತಿ ಸೇತುವೆ ಕೆಳಗಿನ ರಸ್ತೆ ತುಂಬೆಲ್ಲಾ ನೀರು ತುಂಬಿ ಸಂಚಾರ ಕಡಿತಗೊಂಡಿತ್ತು.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಸಿಲುಕಿದ್ದ ವಾಹನ, ಜಾನುವಾರು ಹೊರತೆಗೆದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಲಿಲ್ಲ. ಅಗ್ನಿಶಾಮಕ ದಳದ ಈ ಕಾರ್ಯಾಚರಣೆಗೆ ಸ್ಥಳೀಯರು ‌ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.