
ಬಾಗಲಕೋಟೆ: ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಿದರೆ ಗುಣಮಟ್ಟದ ದಾಳಿಂಬೆ ಹಣ್ಣು ಬೆಳೆಯಲು ಸಾಧ್ಯವಾಗುತ್ತದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ತಮ್ಮಯ್ಯ ಎನ್. ಹೇಳಿದರು.
ತೋಟಗಾರಿಕೆ ವಿಶ್ವವಿದ್ಯಾಲಯದ ರೈತ ಭವನದ ತರಬೇತಿ ಕೇಂದ್ರದಲ್ಲಿ ಬುಧವಾರ ಮುಖ್ಯ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ಇಲಾಖೆ ಬಾಗಲಕೋಟೆ ಹಾಗೂ ಬೀಳಗಿ ಮತ್ತು ಡಾ.ಎಸ್.ಬಿ.ದಂಡಿನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ದಾಳಿಂಬೆ ಬೆಳೆಯಲು ಭೂಮಿಯ ಫಲವತ್ತತೆ ಮುಖ್ಯವಾಗಿರುತ್ತದೆ ಎಂದರು.
ದಾಳಿಂಬೆ ನಾಟಿ ಪೂರ್ಣದಲ್ಲಿ ಭೂಮಿಯನ್ನು ಪರೀಕ್ಷೆ ಮಾಡಿ, ಸಸ್ಯ ಜಂತು ನಿವಾರಣೆ ಮಾಡಬೇಕು. ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ದಾಳಿಂಬೆ ಬೆಳೆಯಲು ಮುಂದಾಗಬೇಕು. ಬೆಳೆದ ಬೆಳೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಉತ್ತಮ ಬೆಲೆಯನ್ನು ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ತೋಟಗಾರಿಕೆ ಬೆಳೆಯಲ್ಲಿ ಬರುವ ಸಮಸ್ಯೆಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಜ್ಞಾನಿಗಳೊಂದಿಗೆ ಚರ್ಚಿಸಲಾಗುತ್ತಿದೆ. ರೈತರ ಜಮೀನಿನಲ್ಲಿಯೇ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಬೂದಿಹಾಳ ಗ್ರಾಮದಲ್ಲಿ 10 ಎಕರೆ ಜಮೀನು ಖರೀದಿಸಲಾಗಿದ್ದು, ದಾಳಿಂಬೆ ಬೆಳೆಯ ಸಸಿ ತಯಾರಿ ಮಾಡಿಕೊಡುವ ಕೆಲಸ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿವಿಯ ಸಂಶೋಧನಾ ನಿರ್ದೇಶಕ ಬಿ.ಫಕ್ರುದ್ದೀನ್ ಮಾತನಾಡಿ, ದಾಳಿಂಬೆ ಬೆಳೆಯನ್ನು ಜಾಗೃತಿಯಿಂದ ಬೆಳೆಯಬೇಕು. ನೀರು ಕಡಿಮೆ ಇದ್ದರೂ ಬೆಳೆ ಬರುತ್ತದೆ. ಆದರೆ ಬೆಳೆಗೆ ಬರುವ ರೋಗವನ್ನು ನಿಯಂತ್ರಿಸುವ ಕೆಲಸವಾಗಬೇಕು. ಅದಕ್ಕಾಗಿ ಬೇಸಾಯ ಪದ್ದತಿಯಲ್ಲಿ ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಬೇಕು ಎಂದರು.
ಕಲಾದಗಿ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಪಾಟೀಲ ಅನುಭವ ಹಂಚಿಕೊಂಡು 1980 ರಿಂದ ದಾಳಿಂಬೆ ಬೆಳೆಯನ್ನು ಬೆಳೆಯುತ್ತಿದ್ದು, ಅದರಿಂದ ಬರುವ ಹಣದಲ್ಲಿ ಒಂದು ಭಾಗ ಕೂಡಿಟ್ಟು, ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಈ ಸಂಸ್ಥೆಯಲ್ಲಿ 1400 ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿದ್ದಾರೆ. ಬೆಳಗಾರರಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವಾಗಬೇಕೆಂದು ಹೇಳಿದರು.
ವಸಂತ ಗಾಣಿಗೇರ, ಕ್ಷೇತ್ರ ಅಧೀಕ್ಷಕ ಡಾ.ಆನಂದ ನಂಜಪ್ಪನವರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ ದಂಡನ್ನವರ ಇದ್ದರು.
ವಾಣಿಜ್ಯ ಬೆಳೆಯಾಗಿರುವ ದಾಳಿಂಬೆ ಹಣ್ಣಿನ ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆ ತೋಟಗಾರಿಕೆ ವಿವಿಯಲ್ಲಿ ನಡೆಯುತ್ತಿದ್ದು ರೈತರಿಗೆ ಆಧುನಿಕ ತಂತ್ರಜ್ಞಾನದ ಪದ್ದತಿಗಳನ್ನು ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ದಾಳಿಂಬೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ.ವಸಂತ ಗಾಣಿಗೇರ ತೋಟಗಾರಿಕಾ ವಿಜ್ಞಾನ ಕೇಂದ್ರದ ಸಹ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.