ADVERTISEMENT

ಬಾಗಲಕೋಟೆ | ಮೆಕ್ಕೆಜೋಳ ಖರೀದಿಗೆ ಮುಂದಾದರೂ ಕೊಡದ ಸ್ಥಿತಿ

ಬಸವರಾಜ ಹವಾಲ್ದಾರ
Published 3 ಡಿಸೆಂಬರ್ 2025, 6:24 IST
Last Updated 3 ಡಿಸೆಂಬರ್ 2025, 6:24 IST
ಬಾಗಲಕೋಟೆ ಎಪಿಎಂಸಿಗೆ ಬಂದಿರುವ ಮೆಕ್ಕೆಜೋಳ
ಬಾಗಲಕೋಟೆ ಎಪಿಎಂಸಿಗೆ ಬಂದಿರುವ ಮೆಕ್ಕೆಜೋಳ   

ಬಾಗಲಕೋಟೆ: ಮೆಕ್ಕೆಜೋಳ ಖರೀದಿ ಆರಂಭಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಆದರೆ, ಅದನ್ನು ಧಾರವಾಡದ ಪಶು ಆಹಾರ ಘಟಕಕ್ಕೆ ತೆಗೆದುಕೊಂಡು ಹೋಗಿ ಕೊಟ್ಟು ಬರಬೇಕು ಎಂಬ ಷರತ್ತಿನ ಕಾರಣಕ್ಕೆ ರೈತರಿಗೆ ಬೆಂಬಲ ಬೆಲೆಯಡಿ ಖರೀದಿಯ ಕೇಂದ್ರದ ಹೆಚ್ಚಿನ ಲಾಭ ದೊರೆಯುವ ಲಕ್ಷಣಗಳಿಲ್ಲ.

ಕರ್ನಾಟಕ ಹಾಲು ಮಹಾಮಂಡಳವು ಪ್ರತಿ ರೈತರಿಂದ 25 ಕ್ವಿಂಟಲ್‌ ಮೆಕ್ಕೆಜೋಳ ಖರೀದಿ ಮಾಡಲಿದೆ. ಅದರ ಗುಣಮಟ್ಟ ಪರೀಕ್ಷೆಗೆ ಒಂದು ಕೆ.ಜಿ ಮೆಕ್ಕೆಜೋಳವನ್ನು ಜಿಲ್ಲೆಯ ರೈತರು ಬಾಗಲಕೋಟೆ, ಹಾಗೂ ಜಮಖಂಡಿಗೆ ತೆಗೆದುಕೊಂಡು ಹೋಗಿ ಕೊಡಬೇಕು. ಪರೀಕ್ಷೆಯಲ್ಲಿ ಪಾಸಾದರೆ ಅದನ್ನು ಧಾರವಾಡದಲ್ಲಿರುವ ಕೆಎಂಎಫ್‌ ಪಶು ಆಹಾರ ಘಟಕಕ್ಕೆ ಹೋಗಿ ಕೊಟ್ಟು ಬರಬೇಕು.

25 ಕ್ವಿಂಟಲ್‌ ಮೆಕ್ಕೆಜೋಳ ತೆಗೆದುಕೊಂಡು ಹೋಗಲು ಪ್ರತಿ ಕ್ವಿಂಟಲ್‌ಗೆ ₹150 ರಿಂದ ₹200 ಖರ್ಚಾಗುತ್ತದೆ. ಜತೆಗೆ ಎರಡು ಗೊಣಿ ಚೀಲದ ಮೊತ್ತವನ್ನೂ ಪಾವತಿಸಬೇಕು. ರೈತ ಒಂದು ದಿನದ ಕೆಲಸ ಬಿಟ್ಟು ಹೋಗಬೇಕು. ಲೋಡಿಂಗ್‌ ಹಾಗೂ ಅನ್‌ಲೋಡಿಂಗ್‌ಗೆ ಹಣ ಪಾವತಿಸಬೇಕು.  ಮಾರುಕಟ್ಟೆಯಲ್ಲಿಯೇ ಪ್ರತಿ ಕ್ವಿಂಟಲ್‌ಗೆ ₹1,900 ದೊರೆಯುತ್ತಿದೆ. ಮೇಲಿನ ಎಲ್ಲ ಖರ್ಚು ಕಳೆದರೆ ರೈತನಿಗೆ ಬೆಂಬಲ ಬೆಲೆಯ ಲಾಭ ತಲುಪುವುದೇ ಎಂಬ ಪ್ರಶ್ನೆ ಎದುರಾಗಿದೆ.

ADVERTISEMENT

ಮೊದಲ ದಿನವಾದ ಮಂಗಳವಾರ 32 ಮಂದಿ ರೈತರು ತಲಾ ಒಂದು ಕೆ.ಜಿ ಸ್ಯಾಂಪಲ್‌ ಅನ್ನು ತಪಾಸಣೆಗೆ ನೀಡಿ ಹೋಗಿದ್ದಾರೆ. ಅದನ್ನು ಇಂದೇ ಧಾರವಾಡದ ಪಶು ಆಹಾರ ಘಟಕಕ್ಕೆ ಕಳುಹಿಸಲಾಗುತ್ತದೆ. ಅದನ್ನು ಪರೀಕ್ಷಿಸುವ ಘಟಕದ ಅಧಿಕಾರಿಗಳು, ನೇರವಾಗಿ ರೈತರ ಮೊಬೈಲ್‌ಗೇ ಸಂದೇಶ ಕಳುಹಿಸಲಿದ್ದಾರೆ. ಆ ನಂತರ ಮೆಕ್ಕೆಜೋಳವನ್ನು ಧಾರವಾಡಕ್ಕೆ ತಲುಪಿಸಬೇಕು ಎನ್ನುತ್ತಾರೆ ಕೆಎಂಎಫ್‌ ನೋಡಲ್‌ ಅಧಿಕಾರಿಯೊಬ್ಬರು.

ಇನ್ನೊಂದೆಡೆ ಕರ್ನಾಟಕ ರಾಜ್ಯ ಸಹಕಾರ ಮಂಡಳದ ಮೂಲಕ ಖರೀದಿ ಮಾಡಲಾಗುತ್ತಿದೆ. ಇದರ ಖರೀದಿ ಹಾಗೂ ನೋಂದಣಿ ಕೇಂದ್ರವನ್ನು ಕೆರೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ರೈತರು ₹5 ಕ್ವಿಂಟಲ್‌ ಮೆಕ್ಕೆಜೋಳವನ್ನು ಅಲ್ಲಿಗೆ ತಂದು ಕೊಡಬೇಕು. 

ಖರೀದಿಯೂ ಕಡಿಮೆ: ಜಿಲ್ಲೆಯಲ್ಲಿ 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈಗಾಗಲೇ ಬಾಗಲಕೋಟೆ ಎಪಿಎಂಸಿಯಲ್ಲಿಯೇ 4 ಲಕ್ಷ ಕ್ವಿಂಟಲ್‌ನಷ್ಟು ಮಾರಾಟವಾಗಿದೆ. ಸಾಗಾಣಿಕೆ ವೆಚ್ಚ ಹೆಚ್ಚಾಗುವುದರಿಂದ ರೈತರು ನೋಂದಣಿಗೆ ಮುಂದಾಗುವರೇ ಎಂದು ಕಾದು ನೋಡಬೇಕಿದೆ.

‘ಜಿಲ್ಲೆಯಲ್ಲಿ ಈಗಾಗಲೇ ಹೆಸರುಕಾಳು, ಸೂರ್ಯಕಾಂತಿಗಾಗಿ ಪ್ರತಿ ತಾಲ್ಲೂಕಿನಲ್ಲಿಯೂ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆ ಕೇಂದ್ರಗಳಲ್ಲಿಯೇ ಮೆಕ್ಕೆಜೋಳವನ್ನು ಖರೀದಿಸಬೇಕು. ಧಾರವಾಡಕ್ಕೆ ತೆಗೆದುಕೊಂಡು ಹೋದರೆ, ನಷ್ಟವಾಗುತ್ತದೆ. ಒಬ್ಬೊಬ್ಬರೇ ರೈತರಿಗೆ ತೆಗೆದುಕೊಂಡು ಹೋಗಲೂ ತೊಂದರೆಯಾಗುತ್ತದೆ’ ಎನ್ನುತ್ತಾರೆ ಹುನಗುಂದ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರವಿ ಸಜ್ಜನರ.

‘ಸ್ಥಳೀಯವಾಗಿಯೇ ಖರೀದಿದಾರರು ಪ್ರತಿ ಕ್ವಿಂಟಲ್‌ಗೆ ₹1,700 ರಿಂದ 1,950ರ ವರೆಗೆ ನೀಡುತ್ತಿದ್ದಾರೆ. ಕೆಲವರು ಖರೀದಿಯಾಗುತ್ತಿದ್ದಂತೆಯೇ ಹಣ ಪಾವತಿಸುತ್ತಿದ್ದಾರೆ. ಧಾರವಾಡಕ್ಕೆ ಹೋದರೆ, ಇಷ್ಟೇ ಬೆಲೆ ಬೀಳುತ್ತದೆ. ಜತೆಗೆ ಅದನ್ನು ತೆಗೆದುಕೊಂಡು ಹೋಗಲೂ ಕಷ್ಟ. ಆದ್ದರಿಂದ ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರ ಆರಂಭಿಸಬೇಕು. ಅದನ್ನು ಸರ್ಕಾರದ ವತಿಯಿಂದಲೇ ಧಾರವಾಡಕ್ಕೆ ಸಾಗಿಸಬೇಕು’ ಎಂಬುದು ರೈತರ ಆಗ್ರಹ.

ಜಿಲ್ಲೆಯಲ್ಲಿಯೇ ಖರೀದಿ ಕೇಂದ್ರಗಳನ್ನು ಆರಂಭಿಸಲಿ ಸಾಗಾಟ ವೆಚ್ಚ ಹೆಚ್ಚಳ ತೆಗೆದುಕೊಂಡು ಹೋಗುವುದೇ ಸವಾಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.