
ಬಾಗಲಕೋಟೆ: ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಂಡು ಜಿಲ್ಲಾಡಳಿತವು ‘ಬಾಗಲಕೋಟೆ ಸ್ಪಂದನೆ’ ಎಂಬ ಹೆಸರಿನಲ್ಲಿ ವಿನೂತನ ಪ್ರಯೋಗ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾದ ‘ಬಾಗಲಕೋಟೆ ಸ್ಪಂದನೆ’ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸಾರ್ವಜನಿಕರು ಕಚೇರಿಗೆ ಬಂದು ಅರ್ಜಿ ಸಲ್ಲಿಸುವುದನ್ನು ತಡೆಗಟ್ಟುವ ಸಲುವಾಗಿ ತಂತ್ರಜ್ಞಾನ ಬಳಸಿಕೊಂಡು ಜನರ ಹತ್ತಿರ ಹೋಗುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕ್ಯೂಆರ್ ಕೋಡ್, ಟೋಲ್ ಫ್ರೀ ಸಂಖ್ಯೆ ಮೂಲಕ ದೂರು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ’ ಎಂದರು.
‘ಸಾರ್ವಜನಿಕರು ತಮ್ಮ ಯಾವುದೇ ಅಹವಾಲುಗಳು ಇದ್ದಲ್ಲಿ ತಾವು ಇದ್ದ ಸ್ಥಳದಿಂದಲೇ ಟೋಲ್ ಪ್ರೀ ನಂಬರ್ 08354-252100, ಸ್ಕ್ಯಾನ್ ಮಾಡಲು ಕ್ಯೂಆರ್ ಕೋಡ್ ಹಾಗೂ ವೆಬ್‍ಸೈಟ್ http://www.bagalkotespandane.in ಮೂಲಕ ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಿದ ದೂರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ರವಾನೆಯಾಗುತ್ತದೆ. ದೂರಿಗೆ ಅಧಿಕಾರಿಗಳು ಸ್ಪಂದಿಸಿದ ಮಾಹಿತಿ ಸಹ ದೂರುದಾರರ ಮೊಬೈಲ್‍ಗೆ ಮೇಸೆಜ್ ಬರುತ್ತದೆ’ ಎಂದರು.
‘ಸಾರ್ವಜನಿಕರೊಂದಿಗೆ ಸಹಕರಿಸಲು ಇದು ನವೀನ ಮಾದರಿಯ ವೇದಿಕೆಯಾಗಿದ್ದು, ಸಾರ್ವಜನಿಕರು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾರ್ಸಾ, ಆರ್.ಟಿ.ಸಿಯಲ್ಲಿ ಬದಲಾವಣೆ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ, ರಸ್ತೆ, ವಿದ್ಯುತ್ ಸಮಸ್ಯೆ, ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾಗಿ ಸ್ಪಂದಿಸದಿರುವುದು, ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯ ಸೇರಿದಂತೆ ಇತರೆ ಅವಶ್ಯಕ ಕೆಲಸಗಳಿಗಾಗಿ ದೂರು ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದರು.
ದೂರುಗಳು ಬಂದ ತಕ್ಷಣ ಅವುಗಳಿಗೆ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದರು.
ಶಾಸಕರಾದ ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಕೆನರಾ ಬ್ಯಾಂಕ್‍ನ ವಲಯ ಕಚೇರಿ ಎಜಿಎಂ ಸತ್ಯನ್, ಬ್ಯಾಂಕ್‍ನ ಜಿಲ್ಲಾ ವ್ಯವಸ್ಥಾಪಕ ರಾಜಕುಮಾರ ಹೂಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.