ADVERTISEMENT

ಬಾಗಲಕೋಟೆಗೂ ಬುಲ್ಡೋಜರ್: ಮಳಲಿ

ಆರ್‌ಎಸ್‌ಎಸ್ ಶತಮಾನೋತ್ಸವ ಅಂಗವಾಗಿ ವಿರಾಟ್‌ ಹಿಂದೂ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:05 IST
Last Updated 22 ಫೆಬ್ರುವರಿ 2026, 1:05 IST
ಬಾಗಲಕೋಟೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ರೇಖಾ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹುನಮಂತ ಮಳಲಿ, ಜಿ.ಎನ್‌. ಪಾಟೀಲ ಪಾಲ್ಗೊಂಡಿದ್ದರು
ಬಾಗಲಕೋಟೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ರೇಖಾ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹುನಮಂತ ಮಳಲಿ, ಜಿ.ಎನ್‌. ಪಾಟೀಲ ಪಾಲ್ಗೊಂಡಿದ್ದರು   

ಬಾಗಲಕೋಟೆ: ‘ಕೃಷ್ಣನ ಕೈಯಲ್ಲಿ ಚಕ್ರ, ಶಿವನ ಕೈಯಲ್ಲಿ ತ್ರಿಶೂಲ ಇದೆ. ಈಗೊಬ್ಬರು ಬುಲ್ಡೋಜರ್ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಗೂ ಬರಲಿದೆ’ ಎಂದು ಧರ್ಮ ಜಾಗರಣ ಸಮಿತಿ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹನುಮಂತ ಮಳಲಿ ಹೇಳಿದರು.

ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಶನಿವಾರ ನವನಗರದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಶೋಭಾಯಾತ್ರೆ ಮೇಲೆ ಕಲ್ಲು ಎಸೆದವರು ಕಿಡಿಗೇಡಿಗಳು. ರಾಷ್ಟ್ರ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಶೋಭಾಯಾತ್ರೆಗೆ ಮಸೀದಿ ಮೇಲಿಂದ ಹೂ ಹಾಕಬೇಕೇ ಹೊರತು ಚ‍‍ಪ್ಪಲಿ ಎಸೆಯಬಾರದು. ಮುಂದೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಪಾಕಿಸ್ತಾನ ಏಳನೇ ತರಗತಿ ಪಠ್ಯದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಪಠ್ಯವಿದೆ. ಅಂತಹ ಯೋಧ ಹುಟ್ಟಲಿ ಎಂದು ಪಠ್ಯದಲ್ಲಿ ಅಳವಡಿಸಲಾಗಿದೆ. ಆದರೆ, ನಮ್ಮಲ್ಲಿ ಅವರ ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವಮಾನ ಮಾಡಿದಂತೆ’ ಎಂದರು

ADVERTISEMENT

‘ಶಿವಾಜಿ ಮಹಾರಾಜ, ಅಫ್ಜಲ್‌ಖಾನ್ ಅವರನ್ನು ವಧೆ ಮಾಡಿದ್ದಕ್ಕೆ ಕಲ್ಲು ಎಸೆದಿದ್ದಾರೆ. ಬೆಳವಣಿಗೆ ಸಹಿಸಿಕೊಳ್ಳಲಾಗದವರು ದ್ವೇಷ ಮಾಡುತ್ತಿದ್ದಾರೆ. ಹಿಂದೂಗಳು ಮತಾಂತರಕ್ಕೆ ಇಳಿದರೆ ಜನರು ಸಾಲುವುದಿಲ್ಲ. ಎಪಿಜೆ ಅಬ್ದುಲ್‌ ಕಲಾಂ, ಶಿಶುನಾಳ ಷರೀಫ್, ಇಬ್ರಾಹಿಂ ಸುತಾರ ಅವರಂತಹ ಮುಸ್ಲಿಮರಾಗಿರಿ’ ಎಂದು ಸಲಹೆ ನೀಡಿದರು.

‘ಪ್ರಧಾನಿ ನರೇಂದ್ರ ಮೋದಿ ಒಬ್ಬರನ್ನೇ ಸ್ಯಾಂಪಲ್‌ ಆಗಿ ನೀಡಿದ್ದೇವೆ. ವಿಶ್ವವೇ ಕೊಂಡಾಡುತ್ತಿದೆ. ಅಂತಹ ಸಾವಿರಾರು ಮಂದಿ ನಮ್ಮಲ್ಲಿದ್ದಾರೆ. ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಒಂದೇ ಕಾನೂನು ಆಗುವವರೆಗೆ ನೀವೂ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಡಿ’ ಎಂದರು.

‘ಸೋಗಲಾಡಿ ಸರ್ಕಾರಕ್ಕೆ ಮತ ಹಾಕಿದ್ದೇವೆ. ಯೋಗ್ಯತೆ ಇಲ್ಲದವರಿಗೆ ಮತ ಹಾಕಬೇಡಿ. ಯಾವುದೇ ಪಕ್ಷಕ್ಕೆ ಮತ ಹಾಕಿ ಎನ್ನುವುದಿಲ್ಲ. ಯಾವುದೇ ಪಕ್ಷದ ಮೇಲೆ ನಂಬಿಕೆ ಇಲ್ಲ. ಕೆಲವರು ಪಕ್ಷದಲ್ಲಿ ಮುಖವಾಡ ಹಾಕಿಕೊಂಡವರಿದ್ದಾರೆ. ಬೇರೆ ಪಕ್ಷದಲ್ಲೂ ಒಳ್ಳೆಯವರಿದ್ದಾರೆ’ ಎಂದರು.

‘ದೇಶ ವಿರೋಧಿ ಮನೆಯಲ್ಲಿದ್ದರೂ ವೈರಿ ಎಂದುಕೊಂಡಾಗ ಮಾತ್ರ ದೇಶ ಉಳಿಯುತ್ತದೆ. ದೇಶದ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳಿ. ಮಚ್ಚು ಹಿಡಿಯುವ ಸಿನಿಮಾ ನಟರನ್ನು ಆದರ್ಶವಾಗಿಟ್ಟುಕೊಳ್ಳಬೇಡಿ. ರೈತರು, ಸೈನಿಕರನ್ನು ಆದರ್ಶವಾಗಿಟ್ಟುಕೊಳ್ಳಿ’ ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ರೇಖಾ, ಅಧ್ಯಕ್ಷತೆ ವಹಿಸಿದ್ದ ಜಿ.ಎನ್‌. ಪಾಟೀಲ ಮಾತನಾಡಿದರು.

ಇದಕ್ಕೂ ಮುನ್ನ ನಡೆದ ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.